ಬ್ಯಾಂಕ್‍ಗಳಲ್ಲಿ 98 ಕೋಟಿ ರೂ. ಕಾಳಧನ ಠೇವಣಿ ಮಾಡಿದ ಹೈದಾರಾಬ್‍ನ ಪ್ರಭಾವ ಉದ್ಯಮಿ ಬಂಧನ

Hydarab-Raid

ಹೈದರಾಬಾದ್, ಡಿ.29-ಹಳೆ ನೋಟು ಅಮಾನ್ಯಗೊಳಿಸಿದ ನಂತರ ದೇಶಾದ್ಯಂತ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಪೊಲೀಸರು ದಾಳಿಗಳನ್ನು ತೀವ್ರಗೊಳಿಸಿದಷ್ಟೂ ಬ್ರಹ್ಮಾಂಡ ಕಾಳಧನ ಮತ್ತು ಅಕ್ರಮಗಳು ಪತ್ತೆಯಾಗುತ್ತಲೇ ಇವೆ. ಬ್ಯಾಂಕ್‍ಗಳಲ್ಲಿ 98 ಕೋಟಿ ರೂ.ಗಳ ಕಪ್ಪು ಹಣ ಠೇವಣಿ ಇಟ್ಟಿದ್ದ ಹೈದಾರಾಬ್‍ನ ಉದ್ಯಮಿಯೊಬ್ಬನನ್ನು ಪೊಲೀಸರು ಬಂಧಿಸಿ ಭಾರಿ ವಂಚನೆ ಮತ್ತು ಅವ್ಯವಹಾರಗಳನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನ ಇಬ್ಬರು ಪುತ್ರರು, ಸೊಸೆ ಮತ್ತು ಸಹಾಯಕರನ್ನೂ ಬಂಧಿಸಲಾಗಿದೆ.
ಕೈಲಾಶ್ ಚಂದ್ ಗುಪ್ತ (65) ಬಂಧಿತ ಉದ್ಯಮಿ. ಈತ ಮೂರು ಚಿನ್ನಾಭರಣ ಅಂಗಡಿಗಳು ಮತ್ತು ಚಿನ್ನ-ಬೆಳ್ಳಿ ತಯಾರಿಕೆ ಘಟಕವನ್ನು ಹೊಂದಿದ್ದಾನೆ. ಮುತ್ತಿನನಗರಿಯ ಚಿನಿವಾರ ಪೇಟೆಯಲ್ಲಿ ಗುಪ್ತ ಪ್ರಭಾವಿ ಉದ್ಯಮಿಯಾಗಿದ್ದಾನೆ. ಈತನ ಇಬ್ಬರು ಪುತ್ರರು, ಒಬ್ಬ ಸೊಸೆ ಮತ್ತು ಮತ್ತೊಬ್ಬ ಮಹಿಳೆ ಈ ಸಂಸ್ಥೆಗಳಿಗೆ ನಿರ್ದೇಶಕರುಗಳಾಗಿದ್ದಾರೆ.

ನೋಟು ರದ್ದತಿ ನಂತರ ಈತ 98 ಕೋಟಿ ರೂ.ಗಳ ಮೊತ್ತದ ಕಾಳ ಧನವನ್ನು ಠೇವಣಿ ಇಡಲು ಕುತಂತ್ರವೊಂದನ್ನು ರೂಪಿಸಿದ ಸಂಗತಿ ತನಿಖೆಯಿಂದ ಬಯಲಾಗಿದೆ. ಈ ದೊಡ್ಡ ಮೊಬಲಗನ್ನು ಬ್ಯಾಂಕ್‍ಗಳಲ್ಲಿ ಠೇವಣಿ ಇಡುವುದಕ್ಕಾಗಿ ಗುಪ್ತ ನಕಲಿ ಮತ್ತು ಬೇನಾಮಿ ಮುಂಗಡ ಪಾವತಿ ಸ್ವೀಕೃತಿಗಳ ಸೋಗಿನಲ್ಲಿ ವಹಿವಾಟು ನಡೆಸಿದ ಬ್ಯಾಂಕುಗಳಿಗೇ ಮಂಕುಬೂದಿ ಎರಚಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ನೋಟು ರದ್ದತಿ ನಂತರ ಅಕ್ರಮ ಹಣ ಗಳಿಕೆಗಾಗಿ ದಾಖಲೆಗಳನ್ನು ತಿರುಚಿ ವಂಚನೆ ಎಸಗಿದ ಆರೋಪಗಳ ಮೇಲೆ ಹೈದರಾಬಾದ್ ಪೊಲೀಸ್ ಘಟಕದ ಕೇಂದ್ರ ಅಪರಾಧ ತನಿಖಾ ವಿಭಾಗದ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ.

ಈ ಪ್ರಕರಣದಲ್ಲಿ ಸೆರೆ ಸಿಕ್ಕಿರುವ ಮತ್ತೊಬ್ಬ ಉದ್ಯಮಿ ನರೇದಿ ನರೇಂದ್ರ ಕುಮಾರ್ (59) ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ ಮತ್ತು ಗುಪ್ತನ ಬಾವ ಮೈದುನ. ನೋಟು ರದ್ದತಿ ನಂತರ ಗುಪ್ತ, ತನ್ನ ಇಬ್ಬರು ಪುತ್ರರಾದ ನಿತಿನ್ ಮತ್ತು ನಿಖಿಲ್, ಸೊಸೆ ನೆಹಾ ಮತ್ತು ಇತರರೊಂದಿಗೆ ಸೇರಿ ಕಾಳಧನವನ್ನು ಬಿಳಿಹಣವಾಗಿ ಪರಿವರ್ತಿಸಲು ಸಂಚು ರೂಪಿಸಿದ್ದನು. ಅಕ್ರಮ ಗಳಿಕೆಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ ನಕಲಿ ಮತ್ತು ಬೇನಾಮಿ ಖಾತೆಗಳನ್ನು ಸೃಷ್ಟಿಸಿ ಅಲ್ಲಿ ಮುಂಗಡ ಪಾವತಿ ಸ್ವೀಕೃತಿ ಸೋಗಿನಲ್ಲಿ ವಹಿವಾಟು ನಡೆಸಿ ಬ್ಯಾಂಕ್‍ಗಳು ಮತ್ತು ಸರ್ಕಾರಕ್ಕೆ ವಂಚಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಉದ್ದೇಶಕ್ಕಾಗಿ ಮುಸದ್ದಿಲಾಲ್ ಜೆಮ್ಸ್ ಅಂಡ್ ಜ್ಯೂವೆಲ್ಸ್ ಪ್ರೈವೇಟ್ ಲಿಮಿಟೆಡ್ ಹಸೆರಿನಲ್ಲಿ 57.85 ಕೋಟಿ ರೂ.ಗಳ ಮೊತ್ತಕ್ಕೆ 3,100 ಗ್ರಾಹಕರಿಗೆ ಮುಂಗಡ ಪಾವತಿ ಸ್ವೀಕೃತಿ ಹೆಸರನಲ್ಲಿ ನಕಲಿ ಮತ್ತು ಬೇನಾಮಿ ವ್ಯವಹಾರ ನಡೆಸಿದ್ದರು. ಎಂದು ತಿಳಿದು ಬಂದಿದೆ. ಇದೇ ರೀತಿ ವೈಷ್ಣವಿ ಬುಲಿಯನ್ ಪ್ರೈವೇಟ್ ಫರ್ಮ್ ಹೆಸರಿನಲ್ಲೂ 40 ಕೋಟಿ ರೂ. ಮೊತ್ತಕ್ಕೆ ಮುಂಗಡ ಪಾವತಿ ಸ್ವೀಕೃತಿ ಅಕ್ರಮ ವಹಿವಾಟು ನಡೆಸಿದ್ದ ಸಂಗತಿಯೂ ಬೆಳಕಿಗೆ ಬಂದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin