ಬ್ಯಾಗ್ ಗಳ ಹಿಡಿಕೆಗಳಲ್ಲಿ ಡ್ರಗ್ಸ್ ಸಾಗಾಟ : ಸ್ಮಗ್ಲರ್ಗಳ ಹೊಸ ತಂತ್ರ,12 ಕೋಟಿ ಮಾದಕ ವಸ್ತು ವಶ
ಬೆಂಗಳೂರು, ಅ.16- ಕಳ್ಳಸಾಗಣೆದಾರರು ಹೊಸ ಹೊಸ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಫ್ಯಾಬ್ರಿಕ್ ಬ್ಯಾಗ್ಗಳ ಹಿಡಿಕೆಗೆ ಮಾದಕ ವಸ್ತುಗಳನ್ನು ತುಂಬಿ ವಿದೇಶಕ್ಕೆ ಸ್ಮಗ್ಲಿಂಗ್ ಮಾಡುತ್ತಿದ್ದ ಚಾಲಾಕಿಯೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಳ್ಳಸಾಗಣೆದಾರನಿಂದ 11.95 ಕೋಟಿ ರೂ. ಮೌಲ್ಯದ 30ಕೆಜಿ ಮೆಥಕ್ಯೂಲಾನ್ ಎಂಬ ಮಾದಕ ವಸ್ತು ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ವ್ಯಕ್ತಿ ರಾಜಾಜಿನಗರದ ನಿವಾಸಿಯಾಗಿದ್ದು, ಕೊರಿಯರ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಸುಂಕ ಅಧಿಕಾರಿಗಳು ತಿಳಿಸಿದ್ದಾರೆ.
ಕೆಐಎ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದ. ಫ್ಯಾಬ್ರಿಕ್ ಬ್ಯಾಗ್ಗಳ ಹಿಡಿಕೆಗಳಿಗೆ ಡ್ರಗ್ಸ್ ತುಂಬಿ ಯಾರಿಗೂ ಅನುಮಾನ ಬರದಂತೆ ಅದನ್ನು ಹೊಲೆದಿದ್ದ. ಆದರೆ, 1600 ಚೀಲಗಳು ಖಾಲಿ ಇದ್ದ ಕಾರಣ ಅನುಮಾನ ಬಂದು ತೀವ್ರ ತಪಾಸಣೆ ನಡೆಸಿದಾಗ ಈ ಚಾಲಾಕಿಯ ಕುತಂತ್ರ ಬೆಳಕಿಗೆ ಬಂದಿತು. ಬೆಂಗಳೂರಿನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ಸಾಗಿಸಲು ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಆರೋಪಿ ವಿರುದ್ಧ ಎನ್ಡಿಪಿಎಸ್ ಕಾಯ್ದೆ-1985 ಅಡಿ ದೂರು ದಾಖಲಿಸಿಕೊಂಡು ಕೋರ್ಟ್ಗೆ ಹಾಜರುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.