ಬ್ರಿಕ್ಸ್ ಸಮ್ಮೇಳನ : ಪಾಕ್‍ನನ್ನು ಇನ್ನಷ್ಟು ಮೂಲೆಗುಂಪು ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ

Spread the love

Brics

ನವದೆಹಲಿ, ಅ.15-ವಿಶ್ವವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯ ಹಾಗೂ ಹೊಸ ಸಹಭಾಗಿತ್ವ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸಹಕಾರಿಯಾಗುವ ಸದಾಶಯದೊಂದಿಗೆ ಗೋವಾ ರಾಜಧಾನಿಯಲ್ಲಿ ಇಂದು ಬ್ರಿಕ್ಸ್ ಮತ್ತು ಬಿಮ್‍ಸ್ಟೆಕ್ ಶೃಂಗಸಭೆಗಳಿಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಜೊತೆಗೆ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗಳನ್ನು ಮುಂದುವರಿಸಲು ಸಜಾಗಿರುವ ಭಾರತಕ್ಕೆ ಈ ಸಮಾವೇಶ ಅತ್ಯಂತ ಪರಿಣಾಮಕಾರಿ ವೇದಿಕೆಯಾಗಿದೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವ ಪಾಕ್‍ನನ್ನು ಇನ್ನಷ್ಟು ಮೂಲೆಗುಂಪು ಮಾಡಲು ಭಾರೀ ಬೆಂಬಲ ಲಭಿಸುವ ಅಪಾರ ನಿರೀಕ್ಷೆ ಇದೆ.   ಎರಡು ದಿನಗಳ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ ಬ್ರಿಕ್ಸ್ ಸಮಾವೇಶದಲ್ಲಿ ಭಾಗವಹಿಸಲು ಪಣಜಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜÁಕೋಬ್ ಜುಮಾ ಹಾಗೂ ಇತರ ದೇಶಗಳ ಮುಖ್ಯಸ್ಥರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಮತ್ತು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹಾಜರಿದ್ದು ಅತಿಗಣ್ಯರನ್ನು ಸ್ವಾಗತಿಸಿದರು.

ಬ್ರಿಕ್ಸ್ ಶೃಂಗಸಭೆಯು ಅಭಿವೃದ್ದಿ, ಶಾಂತಿ, ಸ್ಥಿರತೆ ಮತ್ತು ಸುಧಾರಣೆಗಾಗಿ ಮುಂದುವರಿದ ಕಾರ್ಯಸೂಚಿಯಾಗಲಿದೆ. ನಮ್ಮ ಗುರಿಗಳ ಮಾರ್ಗಕ್ಕೆ ಅಡ್ಡ ನಿಂತಿರುವ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಈ ಸಮಾವೇಶದಲ್ಲಿ ನಾವು ಮಹತ್ವದ ಚರ್ಚೆ ನಡೆಸಲಿದ್ದೇವೆ. ಬ್ರಿಕ್ಸ್ ಶೃಂಗಸಭೆ ಅಂತರ-ಬ್ರಿಕ್ಸ್ ಸಹಕಾರವನ್ನು ಹೆಚ್ಚಿಸಲಿದೆ ಪ್ರಧಾನಿ ಈಗಾಗಲೇ ಫೇಸ್‍ಬುಕ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ..

ಇದೇ ಸಂದರ್ಭದಲ್ಲಿ ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗಳನ್ನು ಮುಂದುವರಿಸಲಿದ್ದು, ಈ ದೇಶಗಳ ನಾಯಕರೊಂದಿಗೆ ಇದನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಜೊತೆಗೆ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗಳನ್ನು ಮುಂದುವರಿಸಲು ಸಜ್ಜಾಗಿರುವ ಭಾರತಕ್ಕೆ ಈ ಸಮಾವೇಶ ಅತ್ಯಂತ ಪರಿಣಾಮಕಾರಿ ವೇದಿಕೆಯಾಗಲಿದೆ. ಇದೇ ವೇಳೆ, ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಸ್ತುತ ಭುಗಿಲೆದ್ದಿರುವ ಉದ್ವಿಗ್ನ ಸ್ಥಿತಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಕಿವಿ ಹಿಂಡಲು ಮೋದಿ ಸಮಾವೇಶವನ್ನು ಸಂದರ್ಭವನ್ನು ಬಳಸಿಕೊಳ್ಳಲಿದ್ದಾರೆ..

ಪರಮಾಣು ಪೂರೈಕೆ ಸಮೂಹದ (ಎನ್‍ಎಸ್‍ಜಿ) ಸದಸ್ಯತ್ವ ಪಡೆಯಲು ಭಾರತಕ್ಕೆ ಚೀನಾ ಹಾಕಿರುವ ಅಡ್ಡಗಾಲು, ಹಾಗೂ ಕಳಂಕ ಹೊತ್ತಿರುವ ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದ ವಿಷಯವನ್ನು ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿ ಜಿನ್‍ಪಿಂಗ್‍ರನ್ನು ಪೇಚಿಗೆ ಸಿಲುಕಿಸಲಿದ್ದಾರೆ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯದ ಉನ್ನತ ಮೂಲಗಳು ತಿಳಿಸಿವೆ.
ಜೈಷ್-ಇ-ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮೇಲೆ ನಿರ್ಬಂಧ ಹೇರುವ ವಿಷಯದಲ್ಲೂ ವಿಶ್ವಸಂಸ್ಥೆಯಲ್ಲಿ ಪರೋಕ್ಷ ವಿರೋಧ ವ್ಯಕ್ತಪಡಿಸಿರುವ ಚೀನಾದ ಔಚಿತ್ಯವನ್ನು ಪ್ರಧಾನಿ ಪ್ರಶ್ನಿಸಲಿದ್ದಾರೆ. ಇದಲ್ಲದೇ, ಪಾಕಿಸ್ತಾನದೊಂದಿಗೆ ರಷ್ಯಾ ಇತ್ತೀಚೆಗೆ ನಡೆಸಿದ ಜಂಟಿ ಸಮರಾಭ್ಯಾಸದಿಂದ ಏಷ್ಯಾ ಪ್ರಾಂತ್ಯದಲ್ಲಿ ಉಂಟಾಗಿರುವ ಅಸಮಾಧಾನದ ಬಗ್ಗೆಯೂ ಮೋದಿ ಪುಟಿನ್ ಗಮನಕ್ಕೆ ತರಲಿದ್ದಾರೆ.

ರಷ್ಯಾ ಜೊತೆ ಮಹತ್ವದ ರಕ್ಷಣಾ ಒಪ್ಪಂದ :

Bricks

ಬ್ರಿಕ್ಸ್ ಸಮಾವೇಶದ ವೇಳೆ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ 39,000 ಕೋಟಿ ರೂ.ಗಳ ಮೌಲ್ಯದ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಲಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪ್ರಧಾನಿ ಮೋದಿ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ಲಭಿಸಲಿದೆ. ಸುಮಾರು 400 ಕಿ.ಮೀ.ಅಂತರದಲ್ಲಿನ ವೈರಿಗಳ ವಿಮಾನ, ಬೇಹುಗಾರಿಕೆ ಜೆಟ್‍ಗಳು, ಕ್ಷಿಪಣಿಗಳು ಮತ್ತು ಡ್ರೋಣ್‍ಗಳನ್ನು ನೂಚ್ಚುನೂರು ಮಾಡಬಲ್ಲ ರಷ್ಯಾದ ಎಸ್-400 ಟ್ರಂಫ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ಒಡಂಬಡಿಕೆ ಮೂಲಕ ಭಾರತವು ತನ್ನ ವೈಮಾನಿಕ ರಕ್ಷಣಾ ಸಾಮಥ್ರ್ಯವನ್ನು ಮತ್ತಷ್ಟು ಬಲಗೊಳಿಸಲಿದೆ.

ಅಭೂತ ಪೂರ್ವ ಭದ್ರತೆ:
ಬ್ರಿಕ್ಸ್ ಮತ್ತು ಬ್ರಿಮ್ ಸ್ಟೆಕ್ ಸಮಾವೇಶದಲ್ಲಿ ಮೋದಿ, ಪುಟಿನ್, ಜಿನ್‍ಪಿಂಗ್, ಟೆಮರ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಸೇರಿದಂತೆ 13 ದೇಶಗಳ ಮುಖ್ಯಸ್ಥರು ಭಾಗವಹಿಸಿರುವುದರಿಂದ ಗೋವಾ ರಾಜ್ಯದಾದ್ಯಂತ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin