ಬ್ರಿಕ್ಸ್ 2016 : ಶತಕೋಟಿ ಡಾಲರ್ ಜಂಟಿ ಹೂಡಿಕೆಗೆ ಭಾರತ-ರಷ್ಯಾ ಒಪ್ಪಂದ

Bricks

ಬೆನೌಲಿಮ್ (ಗೋವಾ), ಅ.15-ಭಾರತ ಮತ್ತು ರಷ್ಯಾ ನಡುವೆ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ರಷ್ಯಾ ಭಾರತ ಹೂಡಿಕೆ ನಿಧಿ ರಚನೆಗೆ ಮಾಸ್ಕೋ ಸಮ್ಮತಿಸಿದ್ದು, ಇದರ ಮೊದಲ ಭಾಗವಾಗಿ 500 ದಶಲಕ್ಷ ಡಾಲರ್‍ಗಳನ್ನು ನೀಡಲಿದೆ. ಅಲ್ಲದೇ ಹೊಸದಾಗಿ ರಚನೆಯಾಗಿರುವ ರಾಷ್ಟ್ರೀಯ ಮೂಲಸೌಕರ್ಯ ಹೂಡಿಕೆ ನಿಧಿಗೆ (ಎನ್‍ಐಐಎಫ್) ಅಷ್ಟೇ ಮೊತ್ತದ ಬಂಡವಾಳ ಹೂಡಲು ನಿರ್ಧರಿಸಿದೆ.  ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಫಂಡ್ (ಆರ್‍ಡಿಐಎಫ್) ಜಂಟಿ ನಿಧಿಗಾಗಿ 500 ದಶಲಕ್ಷ ದಾಲರ್‍ಗಳನ್ನು ಹೂಡಿಕೆ ಮಾಡಲಿದ್ದು, ಭಾರತದಲ್ಲಿ ರಷ್ಯಾದ ವಾಣಿಜ್ಯ ಚಟುವಟಿಕೆಗಳಿಗೆ ಹೂಡಿಕೆ ಅವಕಾಶಗಳು ಮತ್ತು ಬೆಳವಣಿಗೆ ಅವಕಾಶಗಳನ್ನು ಆಕರ್ಷಿಸಲು ನೆರವಾಗಲಿದೆ ಎಂದು ಆರ್‍ಡಿಐಎಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರಿಲ್ ಡಿಮಿಟ್ರೀಲ್ ಹೇಳಿದ್ದಾರೆ.
CuyZqqSVMAAQflP

ರಷ್ಯಾದ ಸಂಸ್ಥೆಗಳೊಂದಿಗೆ ಮೂಲಸೌಕರ್ಯ ಯೋಜನೆಗಳಲ್ಲಿ ಈ ಹಣವನ್ನು ಹೂಡಿಕೆ ಮಾಡಲಾಗುವುದು. ಭಾರತಕ್ಕೆ ಪಾದಾರ್ಪಣೆ ಮಾಡಲಿರುವ ನಮ್ಮ ಕಂಪನಿಗಳು ಇಂಧನ, ಪೆಟ್ರೋಕೆಮಿಕಲ್ಸ್, ಸಾರಿಗೆ ಮೂಲಸೌಕರ್ಯಗಳು ಮತ್ತು ವಿವಿಧ ಯೋಜನೆಗಳಲ್ಲಿ ಬಂಡವಾಳಗಳನ್ನು ತೊಡಗಿಸಲಿವೆ ಎಂದು ಅವರು ವಿವರಿಸಿದ್ದಾರೆ.
ಬ್ರಿಕ್ಸ್ ಸಮಾವೇಶದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಈ ಒಪ್ಪಂದ ಚಾಲನೆಗೆ ಬರಲಿದೆ ಎಂದು ಕಿರಿಲ್ ತಿಳಿಸಿದ್ದಾರೆ.

ಮೋದಿ-ಪುಟಿನ್ ಮಹತ್ವದ ಮಾತುಕತೆ :

CuygUXHVMAEfsjO

ಎರಡು ದಿನಗಳ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ (ಬ್ರಿಕ್ಸ್) ಸಮಾವೇಶದಲ್ಲಿ ಭಾಗವಹಿಸಲು ಪಣಜಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಹಾಗೂ ಇತರ ದೇಶಗಳ ಮುಖ್ಯಸ್ಥರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹಾ ಮತ್ತು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಹಾಜರಿದ್ದು ಅತಿಗಣ್ಯರನ್ನು ಸ್ವಾಗತಿಸಿದರು.  ಶೃಂಗಸಭೆಗೂ ಮುನ್ನ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಬಾಂಧವ್ಯ ಬಲವರ್ಧನೆ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಕುರಿತು ದ್ವಿಪಕ್ಷೀಯ ಚರ್ಚೆ ನಡೆಸಿದರು. ಪಾಕಿಸ್ತಾನದೊಂದಿಗೆ ರಷ್ಯಾ ಇತ್ತೀಚೆಗೆ ನಡೆಸಿದ ಜಂಟಿ ಸಮರಭ್ಯಾಸದ ಬಗ್ಗೆ ಮೋದಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಚೀನಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮತ್ತು ಇತರ ನಾಯಕರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಇದೇ ಸಂದರ್ಭದಲ್ಲಿ ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗಳನ್ನು ಮುಂದುವರಿಸಲಿದ್ದು, ಈ ದೇಶಗಳ ನಾಯಕರೊಂದಿಗೆ ಇದನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಇದೇ ವೇಳೆ, ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಸ್ತುತ ಭುಗಿಲೆದ್ದಿರುವ ಉದ್ವಿಗ್ನ ಸ್ಥಿತಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ಕಿವಿ ಹಿಂಡಲು ಮೋದಿ ಸಮಾವೇಶವನ್ನು ಸಂದರ್ಭವನ್ನು ಬಳಸಿಕೊಳ್ಳಲಿದ್ದಾರೆ..   ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗಳನ್ನು ಮುಂದುವರಿಸಲು ಸಜ್ಜಾ ಗಿರುವ ಭಾರತಕ್ಕೆ ಈ ಸಮಾವೇಶ ಅತ್ಯಂತ ಪರಿಣಾಮಕಾರಿ ವೇದಿಕೆಯಾಗಲಿದೆ.

ರಷ್ಯಾ ಜೊತೆ ಮಹತ್ವದ ರಕ್ಷಣಾ ಒಪ್ಪಂದ :
ಬ್ರಿಕ್ಸ್ ಸಮಾವೇಶದ ವೇಳೆ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ 39,000 ಕೋಟಿ ರೂ.ಗಳ ಮೌ ಲ್ಯದ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಲಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪ್ರಧಾನಿ ಮೋದಿ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ಲಭಿಸಲಿದೆ.

ಅಭೂತಪೂರ್ವ ಭದ್ರತೆ :

ಬ್ರಿಕ್ಸ್ ಮತ್ತು ಬ್ರಿಮ್ ಸ್ಟೆಕ್ ಸಮಾವೇಶದಲ್ಲಿ ಮೋದಿ, ಪುಟಿನ್, ಜಿನ್‍ಪಿಂಗ್, ಟೆಮರ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಸೇರಿದಂತೆ 13 ದೇಶಗಳ ಮುಖ್ಯಸ್ಥರು ಭಾಗವಹಿಸಿರುವುದರಿಂದ ಗೋವಾ ರಾಜ್ಯದಾದ್ಯಂತ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

CuyDu_MUkAEJ_hZ

► Follow us on –  Facebook / Twitter  / Google+

Sri Raghav

Admin