ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡ ಈಶ್ವರಪ್ಪ ಬೆಂಬಲಿಗರಿಗೆ ಬಿಜೆಪಿ ನೋಟಿಸ್ ನೀಡುವ ಸಾಧ್ಯತೆ..?

Rayanna-Brigadee-Eshwarappa

ಬೆಂಗಳೂರು, ಜ.11-ಸಂಗೊಳ್ಳಿರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡ ಕಾರಣಕ್ಕಾಗಿ ಕೆ.ಎಸ್.ಈಶ್ವರಪ್ಪ ಬೆಂಬಲಿಗ ವೆಂಕಟೇಶ್‍ಮೂರ್ತಿ ಬಲಿ ಪಡೆದಿರುವ ಬೆನ್ನಲ್ಲೇ ಬಿಜೆಪಿ ಎರಡನೆ ಹಂತದ ನಾಯಕರ ಮೇಲೆ ಕಣ್ಣಿಟ್ಟಿದೆ.  ಈಶ್ವರಪ್ಪ ಜೊತೆ ಗುರುತಿಸಿಕೊಂಡಿರುವ ಮಾಜಿ ಶಾಸಕರಾದ ಸೊಗಡು ಶಿವಣ್ಣ, ಎಸ್.ಎ.ರವೀಂದ್ರನಾಥ್,ನೇಮಿನಾಯ್ಕ್, ಮಾಜಿ ವಿಧಾನಪರಿಷತ್ ಸದಸ್ಯ ಬೇವಿನಮರದ್, ಮಾಜಿ ಸಂಸದ ವಿರೂಪಾಕ್ಷ ಹಾಗೂ ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಸೇರಿದಂತೆ ಮತ್ತಿತರರಿಗೆ ನೋಟಿಸ್ ನೀಡುವ ಸಂಭವವಿದೆ.
ಸಂಗೊಳ್ಳಿರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಇವರೆಲ್ಲರಿಗೂ ಕಾರಣ ಕೇಳಿ ನೋಟಿಸ್ ನೀಡಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಂಘಟನೆಯಾದ ನಂತರ ತುಮಕೂರು, ಹಾವೇರಿ ಸೇರಿದಂತೆ ಮತ್ತಿತರ ಕಡೆ ಸಭೆ ಸಮಾರಂಭಗಳು ನಡೆದ ವೇಳೆ ಇವರೆಲ್ಲರೂ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದರು. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಾಯಕತ್ವವನ್ನು ವಿರೋಧಿಸುತ್ತಾ ಬಂದಿರುವ ಇವರೆಲ್ಲರೂ ಪರೋಕ್ಷವಾಗಿ ಈಶ್ವರಪ್ಪಗೆ ಬೆಂಬಲ ನೀಡುತ್ತಿದ್ದರು.
ಪದಾಧಿಕಾರಿಗಳ ನೇಮಕಾತಿ ವೇಳೆ ತಮ್ಮನ್ನು ಕಡೆಗಣಿಸಿ ವಿರೋಧಿಗಳಿಗೆ ಯಡಿಯೂರಪ್ಪ ಮಣೆ ಹಾಕಿದ್ದಾರೆ ಎಂದು ಅಸಮಾಧಾನಗೊಂಡಿದ್ದರು. ಹೀಗಾಗಿಯೇ ಈಶ್ವರಪ್ಪ ಬೆಂಬಲಿತ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಂಘಟನೆಯಾದಾಗ ಅವರ ಜೊತೆ ಗುರುತಿಸಿಕೊಂಡಿದ್ದರು.

ಸಂಗೊಳ್ಳಿರಾಯಣ್ಣಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರೂ ಈ ನಾಯಕರೆಲ್ಲರೂ ಯಡಿಯೂರಪ್ಪನಿಗೆ ಮುಜುಗರ ತರಲೆಂದೇ ವೇದಿಕೆ ಹಂಚಿಕೊಳ್ಳುತ್ತಿದ್ದರು. ಇದನ್ನು ಗಂಭಿರವಾಗಿ ಪರಿಗಣಿಸಿರುವ ಪಕ್ಷ ಕಾರಣ ಕೇಲಿ ನೋಟಿಸ್ ನೀಡಲು ಮುಂದಾಗಿದೆ. ಒಂದು ವೇಳೆ ಪಕ್ಷ ನೀಡುವ ನೋಟಿಸ್‍ಗೆ ಸರಿಯಾದ ಉತ್ತರ ಬಾರದಿದ್ದರೆ, ಅಮಾನತು ಮಾಡುವ ಸಂಭವವೂ ಇದೆ. ಈಗಾಗಲೇ ಸಂಗೊಳ್ಳಿರಾಯಣ್ಣ ಬ್ರಿಗೇಡ್‍ನ ಪ್ರಧಾನ ಕಾರ್ಯದರ್ಶಿಯಾಗಿದ್ದ ವೆಂಕಟೇಶ್‍ಮೂರ್ತಿಯನ್ನು ನಿನ್ನೆಯಷ್ಟೆ ಅಮಾನತುಪಡಿಸಲಾಗಿತ್ತು.

ಹೀಗೆ ಹಂತ ಹಂತವಾಗಿ ಈಶ್ವರಪ್ಪ ಜೊತೆ ಗುರುತಿಸಿಕೊಂಡ ಬೆಂಬಲಿಗರಿಗೆ ಕಡಿವಾಣ ಹಾಕಿದರೆ ಬ್ರಿಗೇಡ್ ಸಂಘಟನೆ ಕುಂಠಿತವಾಗುವುದರ ಜೊತೆಗೆ ಈಶ್ವರಪ್ಪ ಏಕಾಂಗಿಯಾಗುತ್ತಾರೆ ಎಂಬ ರಾಜಕೀಯ ಲೆಕ್ಕಾಚಾರವೂ ಇದಲ್ಲಿ ಅಡಗಿದೆ. ಒಬ್ಬೊಬ್ಬರ ವಿರುದ್ಧ ಬ್ರಹ್ಮಾಸ್ತ್ರ ಬಳಸಿದರೆ ಈಶ್ವರಪ್ಪ ತಂತಾನೇ ಸರಿಹೋಗುತ್ತಾರೆ ಎಂಬ ಲೆಕ್ಕಾಚಾರವನ್ನು ಬಿಎಸ್‍ವೈ ಹಾಕಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin