ಬ್ರಿಗೇಡ್ ವಿರುದ್ಧ ಸಹಿ ಸಂಗ್ರಹಕ್ಕೆ ಬಿಜೆಪಿಯಲ್ಲೇ ಪರ-ವಿರೋಧ ಅಭಿಪ್ರಾಯ
ಬೆಂಗಳೂರು, ಜ.25– ಸಂಗೊಳ್ಳಿ ರಾಯಣ್ಣ ಬ್ರಿಗೇಡ್ಗೆ ಕಡಿವಾಣ ಹಾಕುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಣದ ನಿಷ್ಠರು ಸಹಿ ಸಂಗ್ರಹ ಮಾಡುತ್ತಿರುವುದಕ್ಕೆ ಪಕ್ಷದಲ್ಲೇ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲ ಹಿರಿಯ ಮುಖಂಡರು ಯಡಿಯೂರಪ್ಪ ಇಲ್ಲವೆ ಈಶ್ವರಪ್ಪ ಜತೆ ಗುರುತಿಸಿಕೊಳ್ಳದೆ ತಟಸ್ಥವಾಗಿ ಉಳಿಯಲು ತೀರ್ಮಾನಿಸಿದ್ದಾರೆ. ಪಕ್ಷ ನಿಷ್ಠೆಗೆ ತಮ್ಮ ಬೆಂಬಲವೇ ಹೊರತು ಯಾವುದೇ ಒಬ್ಬ ವ್ಯಕ್ತಿ ಪರ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ. ನಾವು ಯಾವಾಗಲೂ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿರುತ್ತೇವೆ. ಯಾರ ಪರವೂ ಇಲ್ಲವೆ ಇನ್ನೊಬ್ಬರ ವಿರುದ್ಧವೂ ಇಲ್ಲ. ಅನಗತ್ಯವಾಗಿ ನಮ್ಮ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಬೇಡಿ ಎಂದು ಕಡ್ಡಿ ಮುರಿದಂತೆ ಕೆಲ ಹಿರಿಯರು ಹೇಳಿದ್ದಾರೆ.
ವಿಶೇಷವಾಗಿ ಬಿಜೆಪಿಯಲ್ಲಿ ಎರಡನೆ ಹಂತದ ನಾಯಕರಾದ ಆರ್.ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಸುರೇಶ್ಕುಮಾರ್, ಎ.ನಾರಾಯಣಸ್ವಾಮಿ ಸೇರಿದಂತೆ ಸಂಸದರಾದ ನಳಿನ್ಕುಮಾರ್ ಕಟಿಲ್, ಅನಂತ್ಕುಮಾರ್ ಹೆಗಡೆ ಮತ್ತಿತರರು ಇದೇ ಅಭಿಪ್ರಾಯವನ್ನು ಮುಖಂಡರಿಗೆ ತಿಳಿಸಿದ್ದಾರೆ. ಇನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಹಾಲಿ ಸಂಸದ ಪ್ರಹ್ಲಾದ್ ಜೋಷಿ, ಕೆ.ಬಿ.ಶಾಣಪ್ಪ ಸೇರಿದಂತೆ ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲ ಶಾಸಕರು, ಸಂಸದರು, ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಕೆಲ ಪದಾಧಿಕಾರಿಗಳು ಯಾವುದೇ ಬಣದ ಜತೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಬಣದ ಜತೆ ಗುರುತಿಸಿಕೊಂಡರೆ ಇಬ್ಬರ ನಿಷ್ಠೂರತೆಗೆ ಗುರಿಯಾಗಬೇಕಾಗುತ್ತದೆ. ಬದಲಿಗೆ ಪಕ್ಷದ ತೀರ್ಮಾನಕ್ಕೆ ಬದ್ಧ ಎನ್ನುವುದಾದರೆ ನಮ್ಮ ಮೇಲೆ ಯಾರೊಬ್ಬರ ಕೆಂಗಣ್ಣೂ ಇರುವುದಿಲ್ಲ ಎಂಬುದು ಈ ನಾಯಕರ ತಂತ್ರವಾಗಿದೆ. ಈಗಾಗಲೇ ಇದೇ ಅಭಿಪ್ರಾಯವನ್ನು ರಾಜ್ಯ ಉಸ್ತುವಾರಿ ಪಿ.ಮುರಳೀಧರ್ರಾವ್ಗೆ ಸ್ಪಷ್ಟಪಡಿಸಿರುವ ಪಕ್ಷನಿಷ್ಠರು ನಾವು ಯಾರೊಬ್ಬರ ಜತೆ ಗುರುತಿಸಿಕೊಂಡಿಲ್ಲ. ಪಕ್ಷದಲ್ಲಿ ಉಂಟಾಗಿರುವ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಬಿಎಸ್ವೈ ಬಣದ ಜತೆ ಗುರುತಿಸಿಕೊಂಡಿರುವ ಸಂಸದರಾದ ಪಿ.ಸಿ.ಮೋಹನ್, ಪ್ರತಾಪ್ ಸಿಂಹ, ಶ್ರೀರಾಮುಲು, ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ಸುರೇಶ್ ಅಂಗಡಿ, ಕರಡಿ ಸಂಗಣ್ಣ, ಪಿ.ಸಿ.ಗದ್ದಿಗೌಡರ್ ಸೇರಿದಂತೆ ರಾಜ್ಯಸಭಾ ಸದಸ್ಯರು, 31 ಶಾಸಕರು, 12 ಮಂದಿ ವಿಧಾನ ಪರಿಷತ್ ಸದಸ್ಯರು, 80ಕ್ಕೂ ಹೆಚ್ಚು ಮಾಜಿ ಶಾಸಕರು ಬಿಎಸ್ವೈ ಬೆಂಬಲಕ್ಕೆ ನಿಂತಿದ್ದರು.
ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಯಡಿಯೂರಪ್ಪ ಕಟ್ಟಾ ಬೆಂಬಲಿಗರು ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಹಿ ಸಂಗ್ರಹದಲ್ಲಿ ತೊಡಗಿದ್ದರು. ಇದೀಗ ಪಕ್ಷದಲ್ಲಿನ ಹಿರಿಯರೇ ಇದಕ್ಕೆ ಆಕ್ಷೇಪಿಸಿರುವುದರಿಂದ ಸದ್ಯಕ್ಕೆ ಬಿಜೆಪಿಯ ಕಮಲ ವಿಲವಿಲ ಎನ್ನುವಂತಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >