ಬ್ರಿಗೇಡ್ ಅಥವಾ ಈಶ್ವರಪ್ಪ ಬಗ್ಗೆ ಪ್ರತಿಕ್ರಿಯಿಸಬಾರದೆಂದು ನನಗೆ ನಾನೇ ನಿರ್ಬಂಧ ಹಾಕಿಕೊಂಡಿದ್ದೇನೆ : ಯಡಿಯೂರಪ್ಪ
ಕಲಬುರಗಿ, ಮೇ 2-ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮತ್ತು ಕೆ.ಎಸ್.ಈಶ್ವರಪ್ಪ ಅವರ ಬಗ್ಗೆ ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ಈ ಬಗ್ಗೆ ನನಗೆ ನಾನೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಬ್ರಿಗೇಡ್ ಬಗ್ಗೆಯಾಗಲಿ, ಈಶ್ವರಪ್ಪ ಬಗ್ಗೆಯಾಗಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಕೇಂದ್ರ ನಾಯಕರ ಜತೆ ಚರ್ಚೆ ನಡೆಸಿದ್ದೇನೆ ಎಂದರು. ಇನ್ನೇನಿದ್ದರೂ ಪಕ್ಷ ಸಂಘಟನೆ ಮಾಡುವುದು ಹಾಗೂ 150ಮಿಷನ್ ಃ 2018 ಚುನಾವಣೆ ಬಗ್ಗೆ ಗಮನ ಹರಿಸುವುದೇ ನನ್ನ ಕೆಲಸ ಎಂದು ತಿಳಿಸಿದ್ದಾರೆ.
ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೇ 5,6ರಂದು ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ. ಅಂದು ಸಭೆಯಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ, ಬರಗಾಲ, ಸಹಕಾರಿ ಕೃಷಿ ಸಾಲ ಮನ್ನಾ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್ಕುಮಾರ್, ರಮೇಶ್ಜಿಗಜಿಣಗಿ ಹಾಗೂ ರಾಜ್ಯ ನಾಯಕರು, ಮುಖಂಡರು ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರದ ಹಣ ಬಳಕೆ ಮಾಡುತ್ತಿಲ್ಲ:
ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ತಮ್ಮ ತಪ್ಪನ್ನು ಇಟ್ಟುಕೊಂಡು ಕೇಂದ್ರದ ಕಡೆ ಬೊಟ್ಟು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಇದೇ ವೇಳೆ ಯಡಿಯೂರಪ್ಪ ದೂರಿದರು. ಬರ ಪರಿಹಾರಕ್ಕೆ ಕೇಂದ್ರ ಹೆಚ್ಚಿನ ಹಣ ನೀಡಿಲ್ಲ. ಕೊಟ್ಟಿರುವುದು ಸಾಕಾಗುವುದಿಲ್ಲ ಎಂದು ಹೋದಲೆಲ್ಲಾ ಮುಖ್ಯಮಂತ್ರಿಗಳು ದೂರುತ್ತಾರೆ. ಆದರೆ, ಕೇಂದ್ರ ಕೊಟ್ಟಿರುವ ಹಣವನ್ನು ಎಷ್ಟರ ಮಟ್ಟಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರಿಸಲಿ ಎಂದು ಸವಾಲು ಹಾಕಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >