ಬ್ರಿಗೇಡ್ ಬೇಕೋ.. ಬಿಜೆಪಿ ಬೇಕೋ.. ಈಶ್ವರಪ್ಪಗೆ ಪ್ರಶ್ನೆ..?
ಬೆಂಗಳೂರು,ಏ.26- ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೇಕೋ ಇಲ್ಲವೇ ಬಿಜೆಪಿ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ.ಇದು ವಿಧಾನಸಭೆ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಣದವರು ನೀಡಿರುವ ಸ್ಪಷ್ಟ ಸಂದೇಶ. ನಾಳೆ ನಗರದ ಅರಮನೆ ಮೈದಾನದಲ್ಲಿ ಭಿನ್ನಮತ ನಾಯಕರು ಪ್ರತ್ಯೇಕ ಸಭೆ ನಡೆಸಿದರೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಈಶ್ವರಪ್ಪ ಬಣಕ್ಕೆ ಎಚ್ಚರಿಸಿದ್ದಾರೆ. ಈ ಸಂಬಂಧ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ವಿಧಾನಪರಿಷತ್ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಲೆಹರ್ಸಿಂಗ್ ಹಾಗೂ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಮ್ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳಲು ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಅಧಿಕಾರ ನೀಡಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾಗೆ ಮನವಿ ಮಾಡಿದ್ದಾರೆ.
ಏನೇ ನಡೆದರೂ ಪಕ್ಷದ ಚೌಕಟ್ಟಿನಲ್ಲೇ ನಡೆಯಬೇಕು. ಭಿನ್ನಮತೀಯರು ತಮಗೆ ಅಸಮಾಧಾನವಿದ್ದರೆ ರಾಜ್ಯಾಧ್ಯಕ್ಷರು ಇಲ್ಲವೇ ರಾಷ್ಟ್ರೀಯ ನಾಯಕರಿಗೆ ದೂರು ನೀಡಬಹುದು. ವೈಯಕ್ತಿಕ ಹಿತಾಸಕ್ತಿಗಾಗಿ ಇಡೀ ಪಕ್ಷವನ್ನೆ ಬಲಿ ಕೊಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ನಾಳೆ ಪ್ರತ್ಯೇಕ ಸಭೆ ನಡೆಸಿದರೆ ಶಿಸ್ತು ಕ್ರಮ ಜರುಗಿಸಲೇಬೇಕಾಗುತ್ತದೆ ಎಂದು ಈಶ್ವರಪ್ಪ ಬಣಕ್ಕೆ ಪುಟ್ಟಸ್ವಾಮಿ ಎಚ್ಚರಿಸಿದ್ದಾರೆ.ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಒಂದಿಬ್ಬರನ್ನು ಮುಂದಿಟ್ಟುಕೊಂಡು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈಶ್ವರಪ್ಪನವರಿಗೆ ಬಿಜೆಪಿ ಬೇಕೋ ಇಲ್ಲವೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬೇಕೋ ಎಂಬುದನ್ನು ಅವರೇ ನಿರ್ಧರಿಸಬೇಕು. ಪಕ್ಷದಿಂದ ಎಲ್ಲವನ್ನು ಅನುಭವಿಸಿ ಈಗ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪುಟ್ಟಸ್ವಾಮಿ ಪ್ರಶ್ನಿಸಿದರು. ಒಂದು ಕಡೆ ನಾನು ಶಿಸ್ತಿನ ಸಿಪಾಯಿ ಎಂದು ಈಶ್ವರಪ್ಪ ಹೇಳುತ್ತಾರೆ. ಮತ್ತೊಂದು ಕಡೆ ಬ್ರಿಗೇಡ್ ಚಟವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೇನು ಏನೂ ಇಲ್ಲ ಎಂದಾಗ ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತಾರೆ. ಇದು ಯಾವ ರೀತಿ ಪಕ್ಷ ನಿಷ್ಠೆ ಎಂದು ತರಾಟೆಗೆ ತೆಗೆದುಕೊಂಡರು. ಬ್ರಿಗೇಡ್ ಚಟುವಟಿಕೆ ನಡೆಸಬಾರದೆಂದು ರಾಷ್ಟ್ರೀಯ ಅಧ್ಯಕ್ಷರೇ ಸೂಚನೆ ಕೊಟ್ಟಿದ್ದಾರೆ. ಗುಂಪುಗಾರಿಕೆ ಮಾಡುವುದರಿಂದ ಪಕ್ಷದಲ್ಲಿ ಅಶಿಸ್ತು ಉಂಟಾಗುತ್ತದೆ ಎಂದು ಹೇಳಿದ್ದರೂ ನಿಷ್ಠಾವಂತರಿಗೆ ಅನ್ಯಾಯವಾಗಿದೆ ಎಂದು ಬಿಂಬಿಸುವುದು ಸರಿಯಲ್ಲ.
ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡು ಅಮಿತ್ ಷಾ ಜೊತೆ ಭಾಷಣ ಮಾಡಿ ಈಗ ಈಶ್ವರಪ್ಪ ಪುನಃ ನಿಷ್ಠರಿಗೆ ಅನ್ಯಾಯವಾಗಿದೆ ಎಂದು ಹಳೇ ಛಾಳಿಯನ್ನೇ ಮುಂದುವರೆಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳತ್ತಾರೆ ಎಂಬುದು ಸರಿಯಲ್ಲ. ರಾಷ್ಟ್ರೀಯ ಅಧ್ಯಕ್ಷರಂತೆ ಸಂಘಟನೆ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು. ಈಗಾಗಲೇ ಕೆಲವು ಕಡೆ ಪದಾಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಕಾಲಕಾಲಕ್ಕೆ ಸಭೆಗಳನ್ನು ನಡೆಸಲಾಗುತ್ತದೆ. ಒಂದಿಷ್ಟು ಬೆರಳಣೆಕೆಯಷ್ಟು ಮಂದಿಗೆ ಅಸಮಾಧಾನವಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.
< Eesanje News 24/7 ನ್ಯೂಸ್ ಆ್ಯಪ್ >