ಬ್ರಿಟನ್ ಸರ್ಕಾರದ ಉನ್ನತ ತಂಡಕ್ಕೆ ಇನ್ಫೋಸಿಸ್ ನಾರಾಯಣ್ ಮೂರ್ತಿ ಅವರ ಅಳಿಯ ಸೇರ್ಪಡೆ
ಲಂಡನ್, ಜ.11- ಬ್ರಿಟನ್ಪ್ರಧಾನಿ ಥೆರೆಸಾ ಮೇ ಅವರ ಉನ್ನತ ತಂಡಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅಳಿಯ ರಿಷಿ ಸುನಾಕ್ ಸೇರ್ಪಡೆ ಯಾಗಿದ್ದಾರೆ. ಸೋಮವಾರ ಥೆರೆಸಾ ಮೇ ಸಚಿವರು ಮತ್ತು ಕಾರ್ಯದರ್ಶಿಗಳ ತಂಡವನ್ನು ಪರಿಷ್ಕರಣೆ ಮಾಡಿದ್ದು, ತಂಡಕ್ಕೆ ಹೊಸದಾಗಿ ರಿಷಿ ಸುನಾಕ್ ಸೇರ್ಪಡೆಯಾಗಿದ್ದಾರೆ. 36 ವರ್ಷದ ಸುನಾಕ್ರನ್ನು ವಸತಿ, ಸಮುದಾಯಗಳು ಮತ್ತು ಸ್ಥಳೀಯ ಸರ್ಕಾರ ಇಲಾಖೆಯ ಅಂಡರ್ ಸೆಕ್ರೆಟರಿ (ಕಾರ್ಯ ದರ್ಶಿ)ಯಾಗಿ ಆಯ್ಕೆ ಮಾಡಲಾಗಿದೆ.
ತಮ್ಮ ಹೊಸ ತಂಡಕ್ಕೆ ಥೆರೆಸಾ ಮೇ ಹಲವು ಸಣ್ಣಪುಟ್ಟ ಸಮುದಾಯಗಳ ಜನರನ್ನು ಸೇರಿಸಿಕೊಂಡಿದ್ದಾರೆ. ತಮ್ಮ ಸಂಪುಟ ನಿಜವಾದ ದೇಶವನ್ನು ಪ್ರತಿನಿಧಿಸಬೇಕು ಎಂಬ ಕಲ್ಪನೆಯಲ್ಲಿ ಅವರು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದ್ದಾರೆ. ರಿಷಿ ಸುನಾಕ್ 2015ರ ಚುನಾವಣೆಯಲ್ಲಿ ನಾರ್ಥ್ ಶೈರ್ನ ರಿಚ್ಮಂಡ್ ನಿಂದ ಗೆದ್ದು ಬ್ರಿಟನ್ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಆಕ್ಸ್ಫರ್ಡ್ ವಿವಿಯಿಂದ ಪದವಿ ಪಡೆದಿರುವ ರಿಷಿ ಸುನಾಕ್ ಲಂಡನ್ ಮೂಲದ ಜಾಗತಿಕ ಹೂಡಿಕೆ ಸಂಸ್ಥೆಯೊಂದಕ್ಕೆ ಸಹ ಸಂಸ್ಥಾಪಕರಾಗಿದ್ದಾರೆ. 1 ಬಿಲಿಯನ್ ಪೌಂಡ್ಮೌಲ್ಯದ ಇವರ ಸಂಸ್ಥೆ ಬ್ರಿಟನ್ನಿನ ಹಲವು ಸಣ್ಣ ಉದ್ಯಮ ಸಂಸ್ಥೆಗಳಲ್ಲಿ ಹಣ ಹೂಡಿದೆ. 2014ರಲ್ಲಿ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು.