ಬ್ರೆಜಿಲ್ ನಲ್ಲಿ ಚಿನ್ನದ ಗಣಿಗೆ ನುಗ್ಗಿ 2.6 ದಶಲಕ್ಷ ಡಾಲರ್ ಮೌಲ್ಯದ ಚಿನ್ನ ಲೂಟಿ
ರಿಯೊ ಡಿ ಜನೈರೋ, ನ.4- ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ದಾಳಿ ಮಾಡಿ, ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 2.6 ದಶಲಕ್ಷ ಡಾಲರ್ ಮೌಲ್ಯದ 2,000 ಔನ್ಸ್ ತೂಕದ ಚಿನ್ನವನ್ನು ಲೂಟಿ ಮಾಡಿ ಪರಾರಿಯಾಗಿರುವ ಸಿನಿಮಿಯ ಘಟನೆ ಬ್ರೆಜಿಲ್ನ ಈಶಾನ್ಯ ಭಾಗದ ಯಮನಾ ಗೋಲ್ಡ್ ಇಂಕ್ಸ್ ಜಾಕೋಬಿನಾ ಗಣಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗಣಿಯಲ್ಲಿ ಕಳೆದ ತಿಂಗಳೇ ಈ ಗೋಲ್ಡ್ ರಾಬರಿ ನಡೆದಿದ್ದರೂ, ಈ ಬಗ್ಗೆ ಬುಧವಾರ ಪೂರ್ಣ ಮಾಹಿತಿ ಲಭಿಸಿದೆ. ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದರೋಡೆಕಾರರ ಗುಂಪು ಅ.17ರಂದು ಮುಂಜಾನೆ ಗಣಿ ಮೇಲೆ ದಾಳಿ ನಡೆಸಿ ಸೆಕ್ಯುರಿಟಿ ಗಾರ್ಡ್ ಮೇಲೆ ಗುಂಡು ಹಾರಿಸಿದರು. ನಂತರ ಗಣಿ ಒಳಗೆ ನುಗ್ಗಿ ಸ್ಫೋಟಕಗಳ ಮೂಲಕ ಸೇಫ್ ಲಾಕರ್ನನ್ನು ಸ್ಫೋಟಿಸಿ ಅದರಲ್ಲಿದ್ದ 2,000 ಔನ್ಸ್ ತೂಕದ ಬಂಗಾರದ ಗಟ್ಟಿಗಳನ್ನು ದೋಚಿ ಪರಾರಿಯಾದರು ಎಂದು ಗಣಿಯ ಅಧಿಕಾರಿಗಳು ಬಹಿರಂಗಗೊಳಿಸಿದ್ದಾರೆ. ಲೂಟಿಯಾಗಿರುವ ಚಿನ್ನದ ಮೌಲ್ಯ 2.6 ದಶಲಕ್ಷ ಡಾಲರ್ಗಳು. ದರೋಡೆ ಕೃತ್ಯದ ಬಗ್ಗೆ ತನಿಖೆ ಮುಂದುವರೆದಿದೆ.
ಶಸ್ತ್ರಸಜ್ಜಿತ ದರೋಡೆಕೋರರು ಕಳೆದ ವರ್ಷ ಮೆಕ್ಸಿಕೋದ ಮ್ಯಾಕ್ಎವೆನ್ ಮೈನಿಂಗ್ಸ್ ಎಲ್ ಗ್ಯಾಲೋ-1 ಗಣಿಯಿಂದ ಸುಮಾರು ಎಂಟು ದಶಲಕ್ಷ ಡಾಲರ್ ಮೌಲ್ಯದ 7,000 ಔನ್ಸ್ ಚಿನ್ನದ ಗಟ್ಟಿಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದರು.