ಬ್ಲಾಕ್ ಅಂಡ್ ವೈಟ್ ನೋಟ್ ದಂಧೆ : ಮಂಡ್ಯದ ಮಳವಳ್ಳಿಯಲ್ಲಿ 14 ಮಂದಿ ದರೋಡೆಕೋರರ ಗ್ಯಾಂಗ್ ಅರೆಸ್ಟ್
ಮಳವಳ್ಳಿ, ಡಿ.28– ಕಿರುಗಾವಲು ಬಳಿ ಹಳೇ ನೋಟನ್ನು ಹೊಸ ನೋಟಿಗೆ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದ ತಂಡವೊಂದರ ಕಾರನ್ನು ಅಡ್ಡಗಟ್ಟಿ ಅವರಲ್ಲಿದ್ದ 66.50 ಲಕ್ಷ ರೂ.ಗಳನ್ನು ದರೋಡೆ ಮಾಡಿದ್ದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಮಳವಳ್ಳಿ ಪೊಲೀಸರು 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುದೀರ್ಕುಮಾರ್ ರೆಡ್ಡಿ , ಕಳೆದ 12ರಂದು ರಾತ್ರಿ ರಾವಂದೂರು – ಕರಳಿಕೊಪ್ಪಲು ಗ್ರಾಮದ ನಡುವೆ ನಿರ್ಜನ ಪ್ರದೇಶದಲ್ಲಿ ಇಟಿಯಾಸ್ ಕಾರೊಂದು ನಿಂತಿದ್ದು ಈ ಕಾರಿನ ಮೇಲೆ ಯಾರೋ ದುಷ್ಕರ್ಮಿಗಳು ಕಾರದ ಪುಡಿ ಎರಚಿ ಮೊಟ್ಟೆ ಹೊಡೆದು ಕಾರಿನಲ್ಲಿದ್ದವರನ್ನು ದರೋಡೆ ಮಾಡಿರುವ ಕುರುಹು ಪತ್ತೆಯಾಗಿತ್ತು.
ಟಿ ನರಸೀಪುರದ ದೊಡ್ಡ ಮುಲಗೂಡು ಗ್ರಾಮದ ವಾಸಿಗಳಾದ ಜೆಸಿಬಿ ದಿಲೀಪ, ಸಿಸಿ ಟಿವಿ ಆನಂದ, ರಾಜೇಶ (ಅ) ರಾಜಿ, ಆನಂದ, ಅಭಿಷೇಕ್ (ಅ) ಅಭಿ. ಪುರುಷೋತ್ತಮ, ವಾಸು, ಬಾಬು, ಮಳವಳ್ಳಿಯ ರಾವಂದೂರು ಗ್ರಾಮದ ಉಮೇಶ, ಚೆನ್ನಕೇಶವ, ಚಲುವರಾಜು, ಮಹದೇವಸ್ವಾಮಿ, ರಾಮಲಿಂಗ ಹಾಗೂ ಶ್ರವಣಬೆಳಗೋಳದ ಬೆಕ್ಕ ಗ್ರಾಮದ ಮಂಜ ಕಾರ್ಮಂಜ ಬಂಧಿತ ಆರೋಪಿಗಳು. ಕಾರು ಪತೆಯಾದ ಮಾರನೇ ದಿನ ಕಿರುಗಾವಲು ಠಾಣೆಗೆ ಹಾಜರಾದ ಕಾಳೇನಹಳ್ಳಿ ವಾಸಿ ಪೋಸ್ಟ್ ಮಾಸ್ಟರ್ ಶ್ರೀನಿವಾಸ ಎಂಬುವರು ಈ ಸಂಬಂಧ ದೂರೊಂದನ್ನು ನೀಡಿ ಅಂದು ಕಾರಿನಲ್ಲಿ ಹಣದ ಸಮೇತ ತಾನು ಸೇರಿದಂತೆ ಜ್ಯೋತಿ ಇಂಟರ್ ನ್ಯಾಷನಲ್ ಹೋಟೇಲ್ ಮಾಲಿಕ ರಂಗಸ್ವಾಮಿ ಅವರ ಮಗ ಶ್ರೀನಿವಾಸ ಹಾಗೂ ಅವರ ಸ್ನೇಹಿತರಾದ ರಾಜು, ಮಂಜುಳ, ಮತ್ತು ಆನಂದ ಅವರು ಹಣದ ಸಮೇತ 12 ರಂದು ಮಧ್ಯಾಹ್ನ 2.30 ರ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ರಾಮಂದೂರು ಬಳಿ ಯಾರೋ ದುಷ್ಕರ್ಮಿಗಳು ಕಾರಿನ ಗಾಜಿಗೆ ಮೊಟ್ಟೆ ಹೊಡೆದು ನಂತರ ಕಾರಿನ ಒಳಗಿದ್ದವರ ಕಣ್ಣಿಗೆ ಕಾರದ ಪುಡಿ ಎರಚಿ ಕಾರಿನಲ್ಲಿದ್ದ ನಾಲ್ವರಿಗೆ ಸೇರಿದ್ದ 66.50 ಲಕ್ಷ ರೂ.ಗಳನ್ನು ದೊಚಿ ಪರಾರಿಯಾಗಿದ್ದಾರೆ ಎಂದು ವಿವರಿಸಿದ್ದರು.
ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆಗಾಗಿ ಅಡಿಷನಲ್ ಎಸ್ಪಿ ಎಸ್. ಸವಿತ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಅವರ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆರ್ ಶ್ರೀಕಾಂತ್, ಡಿಸಿಐಬಿ ಇನ್ಸ್ಪೆಕ್ಟರ್ ಕೆ ರಾಜೇಂದ್ರ, ಕಿರುಗಾವಲು ಠಾಣೆಯ ಪಿಎಸ್ಐ ಎಸ್ ನಾಗೇಶ್, ಗ್ರಾಮಾಂತರ ಠಾಣೆಯ ಪಿಎಸ್ಐ ಎಂ ರವಿಕುಮಾರ್, ಸಿಪಿಸಿ, ಪ್ರಭುಸ್ವಾಮಿ ಅವರ ತಂಡವನ್ನು ರಚಿಸಲಾಗಿತ್ತು.
ಪ್ರಕರಣದ ತನಿಖೆ ಬೆನ್ನುಹತ್ತಿದ್ದ ತನಿಖಾ ತಂಡ ಒಟ್ಟು 14 ಮಂದಿ ಆರೋಪಿಗಳನ್ನು ಬಂಧಿಸಿ ಅವರು ದರೋಡೆ ಮಾಡಿದ್ದ ಹಣದ ಪೈಕಿ 52.81000 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಕಾರ್, ಮೊಬೈಲ್ಗಳು, ಬೈಕ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಆರೋಪಿ ದಿಲೀಪ ಒಂದು ಕೋಟಿ ರೂ. ಹಳೇ ನೋಟುಗಳಿದ್ದ ಅದನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಟ್ಟಲ್ಲಿ ಶೇ.30 ರಷ್ಟು ಕಮಿಷನ್ ನೀಡುವ ಒಪ್ಪಂದ ಮಾಡಿಕೊಂಡು ಶ್ರೀನಿವಾಸ್ ಹಾಗೂ ತಂಡ ಹಣವನ್ನು ರಾವಂದೂರು ಬಳಿ ತರುವಂತೆ ಸೂಚನೆ ನೀಡಿ ಸದರಿ ತಂಡ ಹೊಸ ನೋಟುಗಳ ಸಮೇತ ಬರುತ್ತಿರುವುದನ್ನು ಖಚಿತಪಡಿಸಿಕೊಂಡು ಆ ತಂಡವನ್ನು ದರೋಡೆ ಮಾಡುವ ಯೋಜನೆ ರೂಪಿಸಿ ಅದರಂತೆ ತನ್ನ ಸಹ ಪಾಠಿಗಳ ಸಮೇತ ಈ ಕೃತ್ಯವೆಸಗಿದ್ದ ಎಂದು ಅವರು ವಿವರಿಸಿದರು.
ಅಲ್ಲದೆ ಈ ಭಾರಿ ಮೊತ್ತದ ದರೋಡೆಗೊಳಗಾದ ತಂಡದ ಬಳಿ ಹೇಗೆ ಬಂತು ಎಂಬುದರ ಬಗ್ಗೆ ಸಹ ವಿಚಾರಣೆ ನಡೆಯುತ್ತಿದ್ದು ಈ ಹಣ ಯಾವ ಬ್ಯಾಂಕ್ಗೆ ಸೇರಿದ್ದು ಎಂಬ ಬಗ್ಗೆ ಸಹ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸುದೀರ್ ಕುಮಾರ್ರೆಡ್ಡಿ ವಿವರಿಸಿದರು. ಅಡಿಷನಲ್ ಎಸ್ಪಿ ಸವಿತಾ, ಡಿವೈಎಸ್ಪಿ ಮ್ಯಾಥ್ಯೂ ಥಾಮಸ್, ಸರ್ಕಲ್ ಇನ್ಸ್ಪೆಕ್ಟರ್ ಆರ್. ಶ್ರೀಕಾಂತ್, ಕೆ ರಾಜೇಂದ್ರ, ಭಾರತೀನಗರ ಸಿಪಿಐ ಶಿವಮಲ್ಲವಯ್ಯ ಹಾಜರಿದ್ದರು.