ಬ್ಲೂವೇಲ್ ಗೇಮ್ನ ಕ್ರೇಜ್ಗೆ ಅಂಟಿಕೊಂಡಿದ್ದ 20 ವಿದ್ಯಾರ್ಥಿಗಳ ಅಂಕಗಳಿಗೆ ಕತ್ತರಿ
ಬೆಳಗಾವಿ,ಸೆ.20- ಡೆಡ್ಲಿ ಆನ್ಲೈನ್ ಬ್ಲೂವೇಲ್ ಗೇಮ್ನ ಕ್ರೇಜ್ಗೆ ಅಂಟಿಕೊಂಡಿದ್ದ ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 8 ಹಾಗೂ 9ನೇ ತರಗತಿಯ 20 ವಿದ್ಯಾರ್ಥಿಗಳ ಅಂಕಗಳನ್ನು ಶಾಲಾ ಶಿಕ್ಷಕರು ಕಡಿತ ಮಾಡಿ ಎಚ್ಚರಿಕೆ ನೀಡಿದ್ದಾರೆ. ಶಾಲಾ ಮಂಡಳಿಯು ಈ ವಿದ್ಯಾರ್ಥಿಗಳು ಇತರ ಸಹಪಾಠಿಗಳಿಗೆ ಗೇಮ್ ಆಡುವಂತೆ ಪ್ರಚೋದಿಸುತ್ತಿದ್ದ ಹಿನ್ನೆಲೆಯಲ್ಲಿ ಅವರ ಅಂಕಗಳನ್ನು ಕಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಬೆಳಗಾವಿಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಶಾಲೆ ನಂ.2ನಲ್ಲಿ 16 ಹುಡುಗರು ಹಾಗೂ 4 ಹುಡುಗಿಯರು ಸೇರಿದಂತೆ 20 ವಿದ್ಯಾರ್ಥಿಗಳ ಅಂಕಗಳನ್ನು ಕಡಿತಗೊಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡೆಡ್ಲಿ ಆನ್ಲೈನ್ ಬ್ಲೂವೇಲ್ ಬೂತಕ್ಕೆ ಶಾಲಾ ಮಕ್ಕಳು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲಿನ ಕೇಂದ್ರೀಯ ಶಾಲೆಯಲ್ಲಿ 3000 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 20 ಮಕ್ಕಳು ಈ ಗೇಮ್ಗೆ ಅಂಟಿಕೊಂಡಿದ್ದರು. ಇದರಿಂದ ಉಳಿದವರೆಲ್ಲರಿಗೂ ಇದರ ಪ್ರಚೋದನೆಕಾರಿಯಾಗಬಲ್ಲದು ಎಂಬ ಕಾರಣಕ್ಕಾಗಿ ಪ್ರಥಮ ಹಂತವಾಗಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಂಶುಪಾಲ ಅರುಣ್ಕುಮಾರ್ ಸಿಂಗ್ ತಿಳಿಸಿದ್ದಾರೆ. ಬ್ಲೂವೇಲ್ ಗೇಮ್ಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ಶಾಲಾ ಮಂಡಳಿ ವತಿಯಿಂದ ಮನೋವಿಜ್ಞಾನಿಗಳಿಂದ ಕೌನ್ಸಿಲಿಂಗ್ ಕೊಡಿಸಲು ನಿರ್ಧರಿಸಲಾಗಿದೆ. ಅಲ್ಲದೆ ಅವರ ಪೋಷಕರನ್ನು ಕರೆಸಿ ಈ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.