ಭಯೋತ್ಪಾದಕರಿಗೆ ಹಣ ನೆರವು, ಕಾಶ್ಮೀರದ 12 ಸ್ಥಳಗಳಲ್ಲಿ ಎನ್‍ಐಎ ದಾಳಿ

Spread the love

NIA--01

ನವದೆಹಲಿ/ಶ್ರೀನಗರ, ಆ.16-ಭಯೋತ್ಪಾದನೆ ನಿಗ್ರಹ ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕಾರ್ಯಾಚರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮತ್ತಷ್ಟು ತೀವ್ರಗೊಳಿಸಿದೆ. ಉಗ್ರರಿಗೆ ಹಣಕಾಸು ನೀಡಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ 12ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತ್ಯೇಕತಾವಾದಿಗಳು ಮತ್ತಿತರರ ಮನೆಗಳ ಮತ್ತು ಕಚೇರಿಗಳ ಮೇಲೆ ಎನ್‍ಐಎ ದಾಳಿ ನಡೆಸಿ ಶೋಧ ನಡೆಸಿತು. ಈ ಕಾರ್ಯಾಚರಣೆ ಮೂಲಕ ಉಗ್ರರ ಆರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ನೀಡುವುದು ಈ ಕಾರ್ಯಾಚರಣೆ ಉದ್ದೇಶವಾಗಿದೆ.

ಕಾಶ್ಮೀರ ರಾಜಧಾನಿ ಶ್ರೀನಗರ, ಬರಾಮುಲ್ಲಾ ಮತ್ತು ಹಂದ್ವಾರಾದ 12ಕ್ಕೂ ಅಧಿಕ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತೀವ್ರ ಪರಿಶೀಲನೆ ನಡೆಸಲಾಗಿದೆ ಎಂದು ಎನ್‍ಐಎ ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣಗಳ ಸಂಬಂಧ ಇಂದು ನಡೆಸಿದ ದಾಳಿಯಿಂದಾಗಿ ಕೆಲವು ಮಹತ್ವದ ಸಂಗತಿಗಳು ಪತ್ತೆಯಾಗಿವೆ. ಉಗ್ರರೊಂದಿಗೆ ಇನ್ನೂ ಕೆಲವರು ಹೊಂದಿರುವ ಸಂಪರ್ಕ ಜಾಲದ ಬಗ್ಗೆ ಮಾಹಿತಿಗಳು ಲಭಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಹಾಗೂ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಕದಡಲು ವಿಧ್ವಂಸಕ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಆರೋಪದ ಮೇಲೆ ಎನ್‍ಎಐ ಅಧಿಕಾರಿಗಳು ಜುಲೈ 24ರಂದು ಏಳು ಜನರನ್ನು ಬಂಧಿಸಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾ ಹೋರಾಟ ಮತ್ತು ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಹಣಕಾಸು ಸಂಗ್ರಹಕ್ಕೆ ಇವರು ಸಾಥ್ ನೀಡಿದ್ದರು ಎಂದು ಎನ್‍ಐಎ ಆರೋಪಿಸಿದೆ. ಭಾರತದ ವಿರುದ್ಧ ಪ್ರತಿಭಟನೆ ನಡೆಸುವುದು, ಬಂದ್‍ಗೆ ಕರೆ ನೀಡುವುದು ಹಾಗೂ ಯೋಧರ ವಿರುದ್ಧ ಸ್ಥಳೀಯರನ್ನು ಎತ್ತಿಕಟ್ಟುವಂಥ ಚಟುವಟಿಕೆಗಳಲ್ಲೂ ಈ ಆರೋಪಿಗಳು ತೊಡಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಾಕಿಸ್ತಾನದ ಕುಮ್ಮಕ್ಕಿನೊಂದಿಗೆ ಭಾರತದ ವಿರುದ್ಧ ಸಮರ ಸಾರಲು ಹಾಗೂ ಬುಡಮೇಲು ಕೃತ್ಯಗಳನ್ನು ನಡೆಸುವುದು ಈ ಜಾಲದ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳಿದೆ.

Facebook Comments

Sri Raghav

Admin