ಭಯೋತ್ಪಾದನೆ ದಮನಕ್ಕೆ ಭಾರತ-ಅಮೆರಿಕ ಬದ್ಧ : ಮನೋಹರ್ ಪರಿಕ್ಕರ್
ವಾಷಿಂಗ್ಟನ್, ಆ.30- ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತ ಮತ್ತು ಅಮೆರಿಕ ಸಹಕಾರ ಮುಂದುವರಿಯಲಿದೆ ಎಂದು ಹೇಳಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಈ ವಿಷಯವನ್ನು ಉಭಯ ದೇಶಗಳು ಬಹು ಗಂಭೀರವಾಗಿ ಪರಿಗಣಿಸಿವೆ ಎಂದು ಹೇಳಿದ್ದಾರೆ. ವಾಷಿಂಗ್ಟನ್ನಲ್ಲಿ ಅಮೆರಿಕ ರಕ್ಷಣಾ ಸಚಿವ ಆಶ್ಟನ್ ಕಾರ್ಟರ್ ಅವರೊಂದಿಗೆ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಮಟ್ಟ ಹಾಕಲು ನಮ್ಮ ಸಹಕಾರ ಮುಂದುವರಿಸುವ ನಿರ್ಣಯ ಕೈಗೊಂಡಿದ್ದೇವೆ ಎಂದರು. ನಮ್ಮ ನೆರೆಹೊರೆಯವರಲ್ಲಿ ಆತಂಕವಾದವನ್ನು ನಿರ್ಮೂಲನೆ ಮಾಡುವ ಭಾರತದ ಯತ್ನಗಳಿಗೆ ಅಮೆರಿಕ ನೀಡುತ್ತಿರುವ ಸಹಕಾರ-ಬೆಂಬಲವನ್ನು ಪರಿಕ್ಕರ್ ಪ್ರಶಂಸಿಸಿದರು. ನಮ್ಮ ಮುಕ್ತ ಮತ್ತು ವೈವಿಧ್ಯಮಯ ಸಮಾಜಗಳು ಶಾಂತಿಗೆ ಬದ್ಧವಾಗಿವೆ. ಆದಾಗ್ಯೂ ನಾವು ಭಯೋತ್ಪಾದನೆಯನ್ನು ಎದುರಿಸುವಾಗ, ರಾಜಿ ಪ್ರಶ್ನೆಯೇ ಉದ್ಭವಿಸದು ಎಂದು ಅಮೆರಿಕ ಹೇಳಿರುವುದಾಗಿ ರಕ್ಷಣಾ ಸಚಿವರು ತಿಳಿಸಿದರು.
ಅಮೆರಿಕ ರಕ್ಷಣಾ ಸಚಿವ ಕಾರ್ಟರ್ ಮತ್ತು ನಾನು ಭಯೋತ್ಪಾದನೆ ದಮನದ ವಿಚಾರವನ್ನು ಬಹು ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಂದ ಉಭಯ ರಾಷ್ಟ್ರಗಳ ಸಹಭಾಗಿತ್ವ ಪ್ರೇರಣೆ ಪಡೆದಿದೆ ಎಂದು ಅವರು ಹೇಳಿದರು. ಹಿಂಸಾಚಾರ ಪೀಡಿತ ಕಾಶ್ಮೀರದಲ್ಲಿ ಪ್ರಕ್ಷುಬ್ಧ ಸ್ಥಿತಿ ನೆಲೆಸಲು ಗಡಿಯಾಚೆಗಿನ ಶಕ್ತಿಗಳು ಕುಮ್ಮಕ್ಕು ನೀಡುತ್ತಿವೆ. ಈ ರಾಜ್ಯದಲ್ಲಿ ತಲೆದೋರಿರುವ ಹಿಂಸಾಚಾರವನ್ನು ಹತ್ತಿಕ್ಕಲು ಸರ್ಕಾರವು ಪೂರಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು. ಎರಡೂ ದೇಶಘಳ ನಡುವಣ ರಕ್ಷಣಾ ಬಾಂಧವ್ಯಗಳನ್ನು ಮತ್ತಷ್ಟು ಬಲಗೊಳಿಸಲು ಭಾರತ ಮತ್ತು ಅಮೆರಿಕ ನಿರ್ಧರಿಸಿವೆ ಎಂದು ಅವರು ತಿಳಿಸಿದರು.
► Follow us on – Facebook / Twitter / Google+