ಭಯೋತ್ಪಾದನೆ ಪಿಡುಗನ್ನು ನಿಗ್ರಹಿಸಲು ಯುರೋಪ್ ಗೆ ಮೋದಿ ಕರೆ

Spread the love

Modi--001

ಬರ್ಲಿನ್, ಮೇ 31-ಭಯೋತ್ಪಾದನೆಯು ಮನುಕುಲ ಎದುರಿಸುತ್ತಿರುವ ಮಾರಕ ಸವಾಲು ಎಂದು ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಪಿಡುಗನ್ನು ನಿಗ್ರಹಿಸಲು ವಿಶ್ವಸಂಸ್ಥೆಯ ಸಹಕಾರದೊಂದಿಗೆ ಪರಿಣಾಮಕಾರಿ ಜಾಗತಿಕ ಹೋರಾಟಕ್ಕೆ ಯುರೋಪ್ ಮಹತ್ವದ ಪಾತ್ರ ವಹಿಸಬೇಕೆಂದು ಕರೆ ನೀಡಿದ್ದಾರೆ.   ಜರ್ಮನಿ, ಸ್ಪೇನ್, ರಷ್ಯಾ ಮತ್ತು ಫ್ರಾನ್-ಈ ನಾಲ್ಕು ದೇಶಗಳಿಗೆ ಆರು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ ಮೊದಲ ಹಂತವಾಗಿ ಬರ್ಲಿನ್‍ಗೆ ಕಳೆದ ರಾತ್ರಿ ಆಗಮಿಸಿದರು. ಜರ್ಮನ್ ರಾಜಧಾನಿಯಲ್ಲಿ ಮೋದಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.ಜರ್ಮನಿ ಚಾನ್ಸುಲರ್ ಏಂಜೆಲಾ ಮಾರ್ಕೆಲ್ ಅವರನ್ನು ಭೇಟಿ ಮಾಡಿದ ಪ್ರಧಾನಿ, ಐರೋಪ್ಯ ದೇಶಗಳ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಉದ್ಭವಿಸಿರುವ ವಿದ್ಯಮಾನಗಳ ಕುರಿತು ಮಹತ್ತರಸಮಾಲೋಚನೆ ನಡೆಸಿದರು. ಅಲ್ಲದೇ ದ್ವಿಪಕ್ಷೀಯ ಬಾಂಧವ್ಯಗಳ ಕುರಿತು ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು. ಬ್ರಿಎಕ್ಸಿಟ್ (ಬ್ರಿಟನ್ ಎಕ್ಸಿಟ್-ಐರೋಪ್ಯ ಒಕ್ಕೂಟದಿಂದ ಬ್ರಿಟನ್ ನಿರ್ಗಮನ) ವಿಷಯ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದರು.

ಚೀನಾದ ಒಂದು ಪಟ್ಟಿ, ಒಂದು ರಸ್ತೆ, ಭಾರತ-ಪಾಕ್ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು, ವಾತಾವರಣ ಬದಲಾವಣೆ ವಿಚಾರಗಳೂ ಸಹ ಚರ್ಚೆ ವೇಳೆ ಪ್ರಸ್ತಾಪವಾದವು. ಮೂರು ತಾಸುಗಳ ಕಾಲ ನಡೆದ ಮಾತುಕತೆ ವೇಳೆ ಸ್ಮಾರ್ಟ್ ನಗರಗಳು, ಕೌಶಲ್ಯ ಅಭಿವೃದ್ದಿ, ಇಂಧನ ಸೇರಿದಂತೆ ಸೇರಿದಂತೆ ಉಭಯ ದೇಶಗಳಿಗೂ ಅನುಕೂಲವಾಗುವ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಿತು. ಜುಲೈ 1ರಿಂದ ಭಾರತದಲ್ಲಿ ಜಾರಿಗೆ ಬರಲಿರುವ ಸರಕುಗಳು ಮತ್ತು ಸೇವಾ ತೆರಿಗೆಗಳ (ಜಿಎಸ್‍ಟಿ) ಸುಧಾರಣೆ ಪದ್ದತಿ ಬಗ್ಗೆ ಮಾರ್ಕೆಲ್ ಪ್ರಶಂಸಿದರು ಎಂದು ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಮುಕ್ತಾದಾಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ಸಮರಕ್ಕೆ ಕರೆ:

ಇದೇ ಸಂದರ್ಭದಲ್ಲಿ ಮೋದಿ ಅವರು ಜರ್ಮನಿಯ ಪ್ರಸಿದ್ಧ ದಿನಪತ್ರಿಕೆ ಹ್ಯಾಂಡೆಲ್ಸ್‍ಬ್ಲಾಟ್‍ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಯೋತ್ಪಾದನೆ ಪಿಡುಗನ್ನು ನಿಗ್ರಹಿಸಲು ಜಾಗತಿಕ ಹೋರಾಟಕ್ಕೆ ಯುರೋಪ್ ಮಹತ್ವದ ಪಾತ್ರ ವಹಿಸಬೇಕೆಂದು ಸಲಹೆ ಮಾಡಿದ್ದಾರೆ.  ಭಯೋತ್ಪಾದನೆ ಎಂಬುದು ಮನುಕುಲಕ್ಕೆ ದೊಡ್ಡ ಮಟ್ಟದಲ್ಲಿ ಕಂಟಕಪ್ರಾಯವಾಗಿದೆ. ಐರೋಪ್ಯ ರಾಷ್ಟ್ರಗಳು ಭಯೋತ್ಪಾದನೆ ದಾಳಿಗೆ ತತ್ತರಿಸುತ್ತಿವೆ ಎಂದು ಮೋದಿ ವಿಷಾದ ವ್ಯಕ್ತಪಡಿಸಿದರು. ಜರ್ಮನಿ, ಫ್ರಾನ್ಸ್, ಯುಕೆ ಮತ್ತು ಸ್ವೀಡನ್ ರಾಷ್ಟ್ರಗಳು ಇತ್ತೀಚೆಗೆ ಭಯೋತ್ಪಾದಕರ ದಾಳಿಗೆ ಒಳಗಾದ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin