ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ : ಮೋದಿ ಕರೆ

Modi-001

ವಿಯೆಂಷಿನ್ (ಲಾವೋಸ್), ಸೆ.8-ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಾಗ್ದಾಳಿಯನ್ನು ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಹೆಚ್ಚುತ್ತಿರುವ ಭಯೋತ್ಪಾದನೆ ರಫ್ತು ಪಿಡುಗಿನ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಆಸಿಯಾನ್ ಸದಸ್ಯ ದೇಶಗಳನ್ನು ಕೋರಿದ್ಧಾರೆ.   ಲಾವೋಸ್ ರಾಜಧಾನಿ ವಿಯೆಂಟಿಯಾನ್‍ನಲ್ಲಿ 14ನೇ ಆಸಿಯಾನ್-ಭಾರತ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದನೆ ರಫ್ತು ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದರಿಂದಾಗಿ ಏಷ್ಯಾ ಪ್ರಾಂತ್ಯದಲ್ಲಿ ಭದ್ರತೆಗೆ ಆತಂಕ ಎದುರಾಗಿದೆ. ಈ ಪಿಡುಗಿನ ವಿರುದ್ಧ ಹೋರಾಡಲು ಆಸಿಯಾನ್ ಸದಸ್ಯ ರಾಷ್ಟ್ರಗಳು ಸಮನ್ವಯತೆಯಿಂದ ಸ್ಪಂದಿಸಬೇಕೆಂದು ಮನವಿ ಮಾಡಿದರು.

ಭಾರತ ಮತ್ತು ಪಾಕಿಸ್ತಾನದ ನಡುವೆ ವಾಗ್ದಾಳಿ ತೀವ್ರಗೊಳ್ಳುತ್ತಿರುವ ನಡುವೆಯೇ ಪಾಕ್ ವಿರುದ್ಧ ಈ ವಾರದಲ್ಲಿ ಎರಡನೇ ಬಾರಿ ಅಂತರರಾಷ್ಟ್ರೀಯ ವೇದಿಕೆಯನ್ನು ಸಮರ್ಥವಾಗಿ ಮೋದಿ ಬಳಸಿಕೊಂಡರು. ಸ್ಥಳೀಯ, ಪ್ರಾದೇಶಿಕ ಮತ್ತು ದೇಶೀಯ ಮಟ್ಟದಲ್ಲಿ ಈ ಆತಂಕ ಸೃಷ್ಟಿಯಾಗಿದೆ. ಬಹುಮಟ್ಟಗಳಲ್ಲಿ ಸಮನ್ವಯತೆ, ಸಹಕಾರದ ಮೂಲಕ ಈ ಹಾವಳಿಯನ್ನು ನಿಗ್ರಹಿಸಲು ಆಸಿಯಾನ್ ದೇಶಗಳು ಸಂಘಟಿತ ಪ್ರಯತನ್ ನಡೆಸಬೇಕೆಂದು ಅವರು ಕರೆ ನೀಡಿದರು.  ಸೈಬರ್ ಭದ್ರತೆಯನ್ನು ಹೆಚ್ಚಿಸಲು ಹಾಗೂ ಭಯೋತ್ಪಾದನೆಯನ್ನು ದಮನ ಮಾಡಲು ನಾವು ಸದೃಢವಾದ ಹೆಜ್ಜೆಗಳನ್ನಿಡಬೇಕಿದೆ ಎಂದು ಪ್ರಧಾನಿ ಹೇಳಿದರು.

ಈ ಮಧ್ಯೆ ಮೋದಿಯವರು ಲಾವೋಸ್‍ನ ತಮ್ಮ ಸಹವರ್ತಿ ಥೊಂಗ್‍ಲೌನ್ ಸಿಸೌಲಿಥ್ ಅವರೊಂದಿಗೆ ದ್ವಿಪಕ್ಷೀಯ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ದಕ್ಷಿಣ ಚೀನಾ ಸಮುದ್ರ ವಿಚಾರ ಒಳಗೊಂಡಂತೆ ಪ್ರಾದೇಶಿಕ ವಿಷಯಗಳು ಚರ್ಚೆ ವೇಳೆ ಪ್ರಮುಖವಾಗಿ ಪ್ರಸ್ತಾಪವಾದವು.  ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ಸಂದರ್ಭದಲ್ಲಿ ಪ್ರಧಾನಿಯವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಕೆಲವು ದೇಶಗಳ ನಾಯಕರೊಂದಿಗೆ ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

► Follow us on –  Facebook / Twitter  / Google+

Sri Raghav

Admin