ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ ಟ್ರಂಪ್-ಮೋದಿ

Trump-Modi-01

ನವದೆಹಲಿ/ವಾಷಿಂಗ್ಟನ್, ಜ.25-ಭಾರತವನ್ನು ನಿಜವಾದ ಆಪ್ತಮಿತ್ರ ಮತ್ತು ಪಾಲುದಾರ ಎಂದು ಅಮೆರಿಕ ಪರಿಗಣಿಸಿದೆ. ಅಲ್ಲದೇ ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ಹೋರಾಡುವ ದೃಢ ಸಂಕಲ್ಪ ಕೈಗೊಂಡಿವೆ. ಇದರ ಜೊತೆ ರಕ್ಷಣೆ ಮತ್ತು ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ಒಟ್ಟಿಗೆ ಕಾರ್ಯನಿರ್ವಹಿಸಲು ವಾಷಿಂಗ್ಟನ್ ಮತ್ತು ನವದೆಹಲಿ ಕೃತ ನಿಶ್ಚಯ ಮಾಡಿವೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಎರಡೂ ದೇಶಗಳ ನಡುವೆ ಹೊಸ ಬಾಂಧವ್ಯ ಬೆಸುಗೆಯಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿಯಾಗಿದೆ. ಈ ಇಬ್ಬರು ವಿಶ್ವನಾಯಕರು ಪರಸ್ಪರ ತಮ್ಮ ದೇಶಗಳಿಗೆ ಆಮಂತ್ರಣ ನೀಡಿದ್ದಾರೆ ಎಂದು ಶ್ವೇತಭವನ ಹೇಳಿದೆ.

ರಕ್ಷಣೆ, ಭದ್ರತೆ, ಆರ್ಥಿಕ ವಲಯಗಳಂಥ ವಿವಿಧ ಕ್ಷೇತ್ರಗಳಲ್ಲಿ ಅಮೆರಿಕ ಮತ್ತು ಭಾರತ ನಡುವೆ ಸಹಭಾಗಿತ್ವವನ್ನು ಮತ್ತಷ್ಟು ಬಳಗೊಳಿಸಲು ಇರಬಹುದಾದ ಅವಕಾಶಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಉಭಯ ನಾಯಕರು ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರಾಂತ್ಯಗಳಲ್ಲಿ ಭದ್ರತೆ ಕುರಿತು ಗಹನವಾದ ಚರ್ಚೆ ನಡೆಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧ ಸುಧಾರಣೆಗಳ ಬಗ್ಗೆ ನಿಕಟವಾಗಿ ಕಾರ್ಯನಿರ್ವಹಿಸಲು ಪರಸ್ಪರ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷರೊಂದಿಗೆ ನಡೆದ ದೂರವಾಣಿ ಸಂಭಾಷಣೆ ಫಲಪ್ರದವಾಗಿದೆ. ಭಾರತಕ್ಕೆ ಭೇಟಿ ನೀಡುವಂತೆ ತಾವು ಅವರಿಗೆ ಆಹ್ವಾನ ನೀಡಿರುವುದಾಗಿ ಹೇಳಿದ್ದಾರೆ. ಅಮೆರಿಕದ 45ನೇ ಅಧ್ಯಕ್ಷರಾಗಿ ಜ.20ರಂದು ಪದಗ್ರಹಣ ಮಾಡಿದ ಬಳಿಕ ಟ್ರಂಪ್ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಐದನೇ ವಿಶ್ವ ನಾಯಕ ಎಂಬ ವಿಶೇಷತೆಗೆ ಮೋದಿ ಪಾತ್ರರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin