ಭಾರತದ ಬೌಲರ್‍ಗಳ ದಾಳಿಗೆ ಬೆದರಿದ ಕಿವೀಸ್ ಪಡೆಗೆ ಆರಂಭಿಕ ಆಘಾತ

cricket

ಕೋಲ್ಕತ್ತಾ, ಅ.1-ಭಾರತದ ಬೌಲರ್‍ಗಳ ಬಿಗಿ ದಾಳಿಗೆ ಬೆದರಿದ ಕಿವೀಸ್ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿ ಎದುರಿಸುತ್ತಿದೆ. ಮೊದಲ ದಿನ ಆತಿಥೇಯ ತಂಡಕ್ಕೆ ತಿರುಗೇಟು ನೀಡಿದ ಪ್ರವಾಸಿ ತಂಡ ಬ್ಯಾಟಿಂಗ್ ಮಾಡುತ್ತಿದ್ದು, ಭಾರತದ ಬೌಲರ್‍ಗಳ ದಾಳಿಗೆ ತತ್ತರಿಸಿದ್ದಾರೆ. ಐತಿಹಾಸಿಕ ಕ್ರಿಕೆಟ್ ಕಾಶಿ ಈಡನ್‍ಗಾರ್ಡನ್‍ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೆ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 239 ರನ್‍ನಿಂದ ಎರಡನೆ ದಿನದಾಟ ಆರಂಭಿಸಿದ್ದು, ವಿಕೆಟ್ ಕೀಪರ್ ವೃದ್ಧಿಮಾನ್ ಅಜೇಯ ಅರ್ಧಶತಕ ಗಳಿಸುವ ಮೂಲಕ ತಂಡವನ್ನು 300ರ ಗಡಿ ದಾಟಿಸಿದರು.

ಮೊದಲ ಟೆಸ್ಟ್‍ನಲ್ಲಿ ಆಲ್‍ರೌಂಡರ್ ಪ್ರದರ್ಶನ ತೋರಿದ ರವೀಂದ್ರ ಜಡೇಜಾ 14 ರನ್ ಗಳಿಸಿ ಲಾಗ್ನರ್ ಬೌಲಿಂಗ್‍ನಲ್ಲಿ ಹೆನ್ರಿಗೆ ಕ್ಯಾಚ್ ನೀಡಿ ಔಟ್ ಆದರು. ಇದಾದ ಬಳಿಕ ಬಾಲಂಗೋಚಿ ಭುವನೇಶ್ವರ್ ಕುಮಾರ್ 5ರನ್ ಗಳಿಸಿ ಪೆವಿಲಿಯನ್ ಸೇರಿದರು.

ಸಹಾ ಅಜೇಯ ಅರ್ಧಶತಕ:

ಭಾರತ ತಂಡ 281 ರನ್‍ಗಳಿಗೆ 9 ವಿಕೆಟ್ ಕಳೆದುಕೊಂಡು 300ರೊಳಗೆ ಆಲ್‍ಔಟ್ ಆಗುವ ಭೀತಿಯಲ್ಲಿತ್ತು. ಈ ಸಂದರ್ಭದಲ್ಲಿ ಕ್ರೀಸ್‍ಗೆ ಆಗಮಿಸಿದ ಶಮಿ ಹಾಗೂ ಸಹಾ ಜೋಡಿಯು 9ನೆ ವಿಕೆಟ್ ಜತೆಯಾಟದಲ್ಲಿ 35 ರನ್ ಗಳಿಸಿ ಮೊತ್ತವನ್ನು 316ಕ್ಕೆ ಏರಿಸಿದರು. ಉತ್ತಮವಾಗಿ ಆಟವಾಡಿದ ಸಹಾ 54 ರನ್‍ಗಳಲ್ಲಿ (85 ಎಸೆತ) 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ ಅರ್ಧಶತಕ ಬಾರಿಸಿದರು. ಸಹಾಗೆ ಸಾಥ್ ನೀಡಿದ ಶಮಿ 14 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ ಭಾರತ ಮೊದಲ ಇನ್ನಿಂಗ್ಸ್‍ಗೆ 316 ರನ್‍ಗೆ ಆಲ್‍ಔಟ್ ಆಗಿ ಪ್ರವಾಸಿ ತಂಡಕ್ಕೆ ಬ್ಯಾಟಿಂಗ್‍ಗೆ ಆಹ್ವಾನ ನೀಡಿತು.

ಕೀವಿಸ್‍ಗೆ ಆಘಾತ:

ಮೊದಲ ಟೆಸ್ಟ್‍ನಲ್ಲಿ ಹೀನಾಯ ಸೋಲು ಅನುಭವಿಸಿದ ಪ್ರವಾಸಿ ತಂಡ ಎರಡನೆ ಟೆಸ್ಟ್‍ನಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂಬ ಒತ್ತಡದಲ್ಲಿರುವ ವಿಲಿಯಮ್ಸ್ ಬಳಗ ಆರಂಭದಲ್ಲೇ ಆಘಾತ ಅನುಭವಿಸಿದೆ. ಭಾರತದ ಸವಾಲಿನ ಮೊತ್ತ ಬೆನ್ನಟ್ಟಿರುವ ಕೀವಿಸ್ ಆರಂಭದಲ್ಲೇ 23 ರನ್‍ಗೆ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‍ಮನ್‍ಗಳ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ತಂಡದ ಮೊತ್ತ 10 ರನ್ ಆಗಿದ್ದಾಗ ವೇಗಿ ಭುವನೇಶ್ವರ್ ಕುಮಾರ್ ಮಾರ್ಟಿನ್ ಗುಪ್ಟಿಲ್ (13) ಅವರನ್ನು ಬೌಲ್ಡ್ ಮಾಡಿ ತಂಡಕ್ಕೆ ಮೇಲುಗೈ ತಂದುಕೊಟ್ಟರು.
ಇದಾದ ಬೆನ್ನಲ್ಲೆ ಟಾಮ್ ಲಾಥಮ್ (1) ಅವರನ್ನು ಶಮಿ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಖೆಡ್ಡಕ್ಕೆ ಕೆಡವಿದರು. ಬಳಿಕ ಹೆನ್ರಿ ನಿಕೋಲಸ್ (1) ರನ್ ಗಳಿಸಿದಾಗ ಮತ್ತೆ ಭುವನೇಶ್ವರ್ ಬೌಲಿಂಗ್‍ನಲ್ಲಿ ಕ್ಲೀನ್‍ಬೋಲ್ಡ್ ಆದರು. 23 ರನ್‍ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರಾಸ್ ಟೇಲರ್ ಅಜೇಯ 15 ಹಾಗೂ ರೋಂಚಿ ಅಜೇಯ 15 ರನ್ ಗಳಿಸಿ ತಂಡವನ್ನು ಮೇಲೆತ್ತಲು ಪ್ರಯತ್ನಪಡುತ್ತಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಕಿವೀಸ್ 56 ರನ್ 3 ವಿಕೆಟ್ ಗಳಿಸಿತ್ತು.

► Follow us on –  Facebook / Twitter  / Google+

Sri Raghav

Admin