ಭಾರತದ ಮಾನ ಉಳಿಸಿದ ಸಾಕ್ಷಿ : ಕುಸ್ತಿಯಲ್ಲಿ ಕಂಚು ತಂದ ಗಟ್ಟಿಗಿತ್ತಿ

Sakshi

ರಿಯೋ ಡಿ ಜನೈರೋ, ಆ.18- ರಿಯೋ ಒಲಂಪಿಕ್ಸ್ನ ಮಹಿಳೆಯರ 58ಕೆಜಿ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಭಾರತದ ಹೆಮ್ಮೆಯ ಪುತ್ರಿ ಸಾಕ್ಷಿ ಮಲಿಕ್ ದೇಶದ ಮಾನ ಉಳಿಸಿದ್ದಾರೆ. ರಕ್ಷಾ ಬಂಧನದ ದಿನವಾದ ಭಾರತದ ಪಾಲಿಗೆ ಹೊಸ ದಾಖಲೆಗೂ ಸಾಕ್ಷಿಯಾದರು.  ರಿಯೋದಲ್ಲಿ ನಡೆದ 58ಕೆಜಿ ಕುಸ್ತಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾದ ಕುಸ್ತಿಪಟು ವಲೆರಿಯಾ ವಿರುದ್ಧ 1-3 ಪಾಯಿಂಟ್ಗಳಿಂದ ಪರಾಭವಗೊಂಡಿದ್ದ ಸಾಕ್ಷಿ ಒಂದು ಹಂತದಲ್ಲಿ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಆದರೆ, ವಲೆರಿಯಾ ಫೈನಲ್ ಸುತ್ತಿಗೆ ಪ್ರವೇಶಿಸುತ್ತಿದ್ದಂತೆ ಸಾಕ್ಷಿಗೆ ಕಂಚಿನ ಮೂಲಕ ಪದಕ ಪಡೆಯಲು ರೆಪೆಚೇಸ್ ಮೂಲಕ ಅಪೂರ್ವ ಅವಕಾಶ ಲಭಿಸಿತು. ರೆಪೆಚೇಸ್ನ ಮೊದಲ ಸುತ್ತಿನಲ್ಲಿ ಮಂಗೋಲಿಯಾದ ಒರ್ಬೊನ್ ಪುರೆವೊಚ್ ವಿರುದ್ಧ ಆರಂಭದಿಂದಲೂ ಆಕ್ರಮಣಕಾರಿ ಪಟುಗಳನ್ನು ಪ್ರದರ್ಶಿಸಿದ ಸಾಕ್ಷಿ ಮಲಿಕ್ ಪಂದ್ಯವನ್ನು 12-3 ಪಾಯಿಂಟ್ಗಳ ಅಂತರದಲ್ಲಿ ಜಯಿಸಿದರು.

ಎರಡನೆ ಸುತ್ತಿನ ಪಂದ್ಯದಲ್ಲಿ ಸಾಕ್ಷಿ ಕಿರ್ಜಿಸ್ತಾನದ ಐಸುಲು ಟೆನಿಬೆಕೊವಾ ವಿರುದ್ಧ ಪ್ರಾಬಲ್ಯ ಮೆರೆದು 8-5 ಪಾಯಿಂಟ್ಗಳಿಂದ ವಿಜೇತರಾಗಿ ಕಂಚು ಪದಕ ವಿಜಯದ ನಗೆ ಬೀರಿದರು.
ಪ್ರಾರಂಭದಲ್ಲಿ ಐಸುಲು 5 ಪಾಯಿಂಟ್ಗಳಿಂದ ಮುಂದಿದ್ದರು. 2 ನಿಮಿಷ 20 ಸೆಕೆಂಡ್ಗಳಿದ್ದಾಗ 3 ಅಂಕಗಳಿಂದ ಮುಂದಿದ್ದ ಐಸುಲು ನಂತರ 27 ಸೆಕೆಂಡುಗಳಲ್ಲಿ ಮತ್ತೆ ಎರಡು ಪಾಯಿಂಟ್ಗಳನ್ನು ಗಳಿಸಿದರು. ಸಾಕ್ಷಿ ಪರಾಭವಗೊಳ್ಳುವುದು ನಿಶ್ಚಿತ ಎಂದುಕೊಳ್ಳುತ್ತಿರುವಾಗಲೇ ಪುಟಿದೆದ್ದ ಭಾರತದ ಕುಸ್ತಿಪಟು ಎರಡು ಬಾರಿ ಸತತ 2 ಅಂಕಗಳನ್ನು ಗಳಿಸಿದರು. ನಂತರ 5 ನಿಮಿಷ 51 ಸೆಕೆಂಡ್ಗಳಿದ್ದಾಗ ಇಬ್ಬರು ಪಟುಗಳು ತಲಾ 2 ಅಂಕಗಳನ್ನು ಪಡೆದರು. ತೀವ್ರ ಪೈಪೋಟಿಗೆ ಕಾರಣವಾದ ಈ ಪಂದ್ಯವು ಮುಕ್ತಾಯಗೊಳ್ಳಲು ಇನ್ನೂ 9 ನಿಮಿಷಗಳು ಇದೆ ಎನ್ನುವಾಗ ಸಾಕ್ಷಿ 3 ಪಾಯಿಂಟ್ಗಳಿಸಿ ಗೆದ್ದಾಗ ಭಾರತದಲ್ಲಿ ಸಡಗರ-ಸಂಭ್ರಮ ಮುಗಿಲು ಮುಟ್ಟಿತು. ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಸಾಕ್ಷಿ ತಮ್ಮ 12 ವರ್ಷಗಳ ಪರಿಶ್ರಮದ ಫಲವಿದು ಎಂದು ಹೇಳಿದ್ದಾರೆ.

ಪ್ರಧಾನಿ ಅಭಿನಂದನೆ:

ರಿಯೋದಲ್ಲಿ ಸಾಕ್ಷಿ ಭಾರತದ ಪರವಾಗಿ ಮೊದಲ ಪದಕ ಗೆದ್ದಿರುವುದಕ್ಕೆ ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ರಕ್ಷಾ ಬಂಧನದ ದಿನವಾದ ಇಂದು ಸಾಕ್ಷಿ ಗೆಲುವು ಭಾರತಕ್ಕೆ ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin