ಭಾರತದ ವೇಗದ ಬೌಲಿಂಗ್‍ಗೆ ನಲುಗಿದ ಆಸ್ಟ್ರೇಲಿಯಾ

 

ಧರ್ಮಶಾಲಾIndia--01, ಮಾ. 26– ಭಾರತದ ವೇಗದ ಬೌಲರ್‍ಗಳಾದ ಭುವನೇಶ್ವರ್‍ಕುಮಾರ್ ಹಾಗೂ ಉಮೇಶ್‍ಯಾದವ್‍ರ ಶಿಸ್ತುಬದ್ಧ ಬೌಲಿಂಗ್‍ಗೆ ತಲೆದೂಗಿದ ಸ್ಮಿತ್ ಪಡೆ ಆರಂಭದಲ್ಲೇ 3 ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು ಟೆಸ್ಟ್ ಕುತೂಹಲ ಘಟ್ಟದತ್ತ ಸಾಗಿದೆ.  ಇದಕ್ಕೂ ಮುನ್ನ ಇಂದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಅಲೌಂಡರ್ ರವೀಂದ್ರ ಜಡೇಜಾ (63 ರನ್ 4 ಬೌಂಡರಿ, 4 ಸಿಕ್ಸರ್)ರ ನೆರವಿನಿಂದ 332 ರನ್ ಗಳಿಸುವ ಮೂಲಕ 32 ರನ್‍ಗಳ ಅಲ್ಪ ಮುನ್ನಡೆ ಸಾಧಿಸಿತು.

ಯಾದವ್, ಭುವಿ ಮ್ಯಾಜಿಕ್:

2 ಇನ್ನಿಂಗ್ಸ್‍ನಲ್ಲಿ ಬ್ಯಾಟಿಂಗ್ ಮಾಡಲು ಬಂದ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ರೆನ್‍ಶಾನ್ ಆಕ್ರಮಣಕಾರಿ ಆಟಕ್ಕೆ ಮುಂದಾದರು.  ಉಮೇಶ್ ಯಾದವ್‍ರ ಬೌಲಿಂಗ್‍ನಲ್ಲಿ ಬೌಂಡರಿ ಬಾರಿಸುವ ಮೂಲಕ ಖಾತೆ ಆರಂಭಿಸಿದ ರೆನ್‍ಶಾನ್ ನಂತರ ತಾಳ್ಮೆಯುತ ಆಟಕ್ಕೆ ಮುಂದಾದರು.  ವಾರ್ನರ್ (6 ರನ್,1 ಬೌಂಡರಿ) ಕೂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಉಮೇಶ್‍ಯಾದವ್ ಅವರ ಬಾಲನ್ನು ಬೌಂಡರಿ ಗೆರೆ ದಾಟಿಸುವ ರಭಸದಲ್ಲಿ ವಿಕೆಟ್ ಕೀಪರ್ ಸಾಹ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು.

ವಾರ್ನರ್ ಔಟಾಗುತ್ತಿದ್ದಂತೆ ಕ್ರೀಸ್‍ಗಿಳಿದ ಆಸೀಸ್ ನಾಯಕ ಸ್ಟೀವನ್ ಸ್ಮಿತ್ 3 ಬೌಂಡರಿ ಬಾರಿಸುವ ಮೂಲಕ ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರಾದರೂ ಭುವನೇಶ್ವರ್‍ಕುಮಾರ್‍ರ ಬೌಲಿಂಗ್ ಗತಿಯನ್ನು ಅರಿಯದೆ ಕ್ಲೀನ್ ಬೋಲ್ಡ್ ಆದರು. ಮರು ಓವರ್‍ನಲ್ಲೇ ರೆನ್‍ಶಾ ಉಮೇಶ್‍ಯಾದವ್‍ರ ಬೌಲಿಂಗ್‍ನಲ್ಲಿ ಸಾಹಗೆ ಕ್ಯಾಚ್ ನೀಡಿ ಡಗ್‍ಔಟ್‍ನತ್ತ ಹೆಜ್ಜೆ ಹಾಕಿದರು.

ಮ್ಯಾಕ್ಸ್‍ವೆಲ್- ಹ್ಯಾಂಡ್ಸ್‍ಕೋಮ್ ಆಸರೆ:

31 ರನ್‍ಗಳಿಗೆ ಪ್ರಮುಖ 3 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕ್ಕಿದ್ದ ಆಸೀಸ್ ತಂಡಕ್ಕೆ ಮಧ್ಯಮ ಕ್ರಮಾಂಕದ ಆಟಗಾರರಾದ ಮ್ಯಾಕ್ಸ್‍ವೆಲ್ ಹಾಗೂ ಹ್ಯಾಂಡ್ಸ್‍ಕೋಮ್ ಆಸರೆಯಾಗಿ ನಿಂತಿದ್ದಾರೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಆಸ್ಟ್ರೇಲಿಯಾ ತಂಡವು 3 ವಿಕೆಟ್‍ಗಳನ್ನು ಕಳೆದುಕೊಂಡು 75 ರನ್‍ಗಳನ್ನು ಗಳಿಸಿದ್ದು ಮ್ಯಾಕ್ಸ್‍ವೆಲ್ (29 ರನ್, 5 ಬೌಂಡರಿ, 1 ಸಿಕ್ಸರ್) ಹಾಗೂ ಹ್ಯಾಂಡ್ಸ್‍ಕೋಮ್ (12 ರನ್, 2 ಬೌಂಡರಿ) ಗಳಿಸಿ ಕ್ರೀಸ್‍ನಲ್ಲಿದ್ದರು.

ಅರ್ಧಶತಕ ಸಿಡಿಸಿದ ಜಡೇಜಾ:

ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರವೀಂದ್ರಜಡೇಜಾ ಇಂದು ಕೂಡ ಆಸ್ಟ್ರೇಲಿಯಾದ ಬೌಲರ್‍ಗಳನ್ನು ದಂಡಿಸಿ ಔಟಾಗುವ ಮುನ್ನ 63ರನ್(4 ಬೌಂಡರಿ, 4 ಸಿಕ್ಸರ್) ಸಿಡಿಸಿದರು. ಜಡೇಜಾಗೆ ಉತ್ತಮ ಸಾಥ್ ನೀಡಿದ ಸಾಹ (31ರನ್, 2 ಬೌಂಡರಿ) ಔಟಾದ ನಂತರ ಬಂದ ಬಾಲಂಗೋಚಿಗಳು ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲದೆ ಭಾರತ 332 ರನ್‍ಗಳಿಗೆ ಸರ್ವಪತನವಾಯಿತು.  ಆಸ್ಟ್ರೇಲಿಯಾದ ಪರ ಲಿಯೋನ್ 5 ವಿಕೆಟ್ ಕಬಳಿಸಿದರೆ, ಕುಮ್ಮಿನ್ಸ್ -3, ಹೆಜಲ್‍ವುಡ್ ಹಾಗೂ ಓ ಕೆಫೆ ತಲಾ 1 ವಿಕೆಟ್ ಕಬಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin