ಭಾರತದ ಸಂವಿಧಾನವು ಎಲ್ಲ ಕಾನೂನುಗಳ ತಾಯಿ ಇದ್ದಂತೆ

8

ಬೆಳಗಾವಿ,ಮಾ.1- ಭಾರತದ ಸಂವಿಧಾನವು ಎಲ್ಲ ಕಾನೂನುಗಳ ತಾಯಿ ಇದ್ದಂತೆ. ಪ್ರತಿಯೊಬ್ಬ ನಾಗರಿಕ ಸಂವಿಧಾನದ ಆಶಯದಂತೆ ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ದೇಶದ ಪ್ರಗತಿಗೆ ಕೈ ಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಿರಣ ಕಿಣಿ ಕರೆ ನೀಡಿದರು.  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಸಂವಿಧಾನದ ಆಶಯ ಮತ್ತು ಮೂಲಭೂತ ಕರ್ತವ್ಯಗಳು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇವುಗಳನ್ನು ಸಮಾನವಾಗಿ ನಿಭಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಸುಸೂತ್ರವಾಗಿ ನಡೆಯಬಲ್ಲದು ಎಂದರು.

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ . ಶಿವಾನಂದ ಹೊಸಮನಿ ಮಾತನಾಡಿ ಸಂವಿಧಾನ ನಮ್ಮ ದೇಶದ ಬೈಬಲ್ ಇದ್ದಂತೆ. ಸಂವಿಧಾನದ ಆಶಯದ ಪ್ರಕಾರ ಕರ್ತವ್ಯಗಳನ್ನು ನಿರ್ವಹಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಕರ್ತವ್ಯಗಳ ಮಹತ್ವ ಅರಿತುಕೊಂಡು ಅವುಗಳನ್ನು ನಿಭಾಯಿಸಿದಾಗ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ವಿಶ್ವನಾಥ್ ಎಂ. ಅವರು, ಸಂವಿಧಾನದ ಆಶಯ ಮತ್ತು ಮೂಲಭೂತ ಕರ್ತವ್ಯಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ಸಂವಿಧಾನ ಪ್ರತಿ ಭಾರತೀಯನ ಧರ್ಮಗ್ರಂಥ ಆಗಬೇಕು ಎಂದು ಪ್ರತಿಪಾದಿಸಿ. ಸಂವಿಧಾನದಲ್ಲಿ ಉಲ್ಲೇಖಿತ ಕರ್ತವ್ಯಗಳ ಪಾಲನೆಯಿಂದ ಭ್ರಾತೃತ್ವ, ದೇಶದ ಏಕತೆ ಹಾಗೂ ಸಮಗ್ರತೆ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ ಹಕ್ಕುಗಳ ರಕ್ಷಣೆಯ ಭರಾಟೆಯಲ್ಲಿ ಕರ್ತವ್ಯಗಳ ಪಾಲನೆ ಗೌಣವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಯುವ ಸಮುದಾಯಕ್ಕೆ ಮೂಲಭೂತ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಇಂತಹ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.
ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಂದೀಪ ಬೆಳಗಲಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಮಲಾಕ್ಷಿ ತಡಸದ, ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆಯ ಅನಂತ ಪಪ್ಪು, ಎಂ.ಎಲ್. ಜಮಾದಾರ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin