ಭಾರತದ ಸೇನೆಯ ವಿರುದ್ಧ ಎಫ್‍ಐಆರ್ ದಾಖಲಿಸಿದ ಕಾಶ್ಮೀರದ ಪೊಲೀಸರು

Spread the love

Jammu-Kashmir--01

ಜಮ್ಮು-ಕಾಶ್ಮೀರ, ಏ.17- ಕಾಶ್ಮೀರಿ ಯುವಕನನ್ನು ಜೀಪಿನ ಮುಂಭಾಗಕ್ಕೆ ಗುರಾಣಿಯಂತೆ ಕಟ್ಟಿದ ಭಾರತದ ಸೇನೆಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪ್ರತಿಭಟನಾಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಸೇನೆಯ ಅಧಿಕಾರಿಗಳು ಕಾಶ್ಮೀರಿ ಯುವಕನನ್ನೇ ಜೀಪಿನ ಮುಂಭಾಗಕ್ಕೆ ಕಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಅಂತರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿತ್ತು.  ಈ ಘಟನೆ ಕುರಿತಂತೆ ವಿವರವಾದ ವರದಿ ನೀಡಲು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸೂಚಿಸಿದ್ದರು. ಇದಾದ ಬೆನ್ನಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೇನೆಯ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಿದ್ದಾರೆ.

ಇನ್ನು ಘಟನೆ ಕುರಿತಂತೆ ಸೇನೆಯೂ ವಿವರವಾದ ತನಿಖೆ ನಡೆಸುತ್ತಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಭಾರತ ಸರಕಾರ ಸೇನೆಯ ಬೆನ್ನಿಗೆ ನಿಲ್ಲಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಒನ್ ಇಂಡಿಯಾಗೆ ಹೇಳಿಕೆ ನೀಡಿವೆ.  ಹೀಗಿದ್ದೂ ಬಿಜೆಪಿ ಮತ್ತು ಪಿಡಿಪಿ ನೇತೃತ್ವದ ಸಮ್ಮಿಶ್ರ ಸರಕಾರವಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಏ.9ರಂದು ಶ್ರೀನಗರ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ವೇಳೆ ಈ ಘಟನೆ ನಡೆದಿತ್ತು. ಕಲ್ಲು ತೂರಾಟ ನಡೆಸುತ್ತಿದ್ದ ಗುಂಪನ್ನು ಹಾದು ಹೋಗಲು ಬುದ್ಗಾಮ್ ಜಿಲ್ಲೆಗೆ ಸೇರಿದ ಸೀತಾಹರಣ್ ಗ್ರಾಮದ ಪಾರೂಕ್ ಅಹ್ಮದ್ ದಾರ್ ಎನ್ನುವ ಯುವಕನನ್ನು ಜೀಪಿನ ಮುಂಭಾಗಕ್ಕೆ ಕಟ್ಟಲಾಗಿತ್ತು. ಈ ಮೂಲಕ ಕಲ್ಲು ತೂರಾಟದ ವಿರುದ್ಧ ಮನುಷ್ಯನನ್ನೇ ಸೇನೆ ಗುರಾಣಿಯಂತೆ ಬಳಸಿಕೊಂಡಿತ್ತು.

ವಿಶೇಷ ಎಂದರೆ ಉಪಚುನಾವಣೆಯಲ್ಲಿ ಕೇವಲ ಶೇ.7.14 ಮತದಾನವಾಗಿತ್ತು. ಇದರಲ್ಲೇ ಫಾರೂಕ್ ಅಹ್ಮದ್ ದರ್ ಕೂಡಾ ಮತದಾನ ಮಾಡಿದ್ದರು. ಮತದಾನ ಮುಗಿಸಿ ಬರುವಾಗ ಸೇನೆ ಅವರನ್ನು ಈ ರೀತಿ ಜೀಪಿಗೆ ಕಟ್ಟಿತ್ತು. ಸೇನೆಯ 53 ರಾಷ್ಟ್ರೀಯ ರೈಫ್ಸ್ ವಿಭಾಗ ಈ ಕೃತ್ಯ ಎಸಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin