ಭಾರತ್ ಬಂದ್‍ಗೆ ರಾಜ್ಯ ಸರ್ಕಾರ ಬೆಂಬಲ ನೀಡಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

Ambedker ಬೆಂಗಳೂರು, ನ.26- ಕೇಂದ್ರ ಸರ್ಕಾರ 500 ಮತ್ತು 1000ರೂ.ಮುಖ ಬೆಲೆಯ ನೋಟುಗಳ ನಿಷೇಧ ಮಾಡಿರುವುದನ್ನು ವಿರೋಧಿಸಿ ನ.28ರಂದು ಕರೆ ನೀಡಿಲಾಗಿರುವ ಭಾರತ್ ಬಂದ್‍ಗೆ ಸರ್ಕಾರ ಬೆಂಬಲ ನೀಡಿಲ್ಲ.   ಶಾಲಾ -ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದ ಮುಂಭಾಗ ಮೂಲಸ್ಥಳದಿಂದ ಮರುಸ್ಥಾಪನೆಗೊಂಡ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಭಯೋತ್ಪಾದನೆ ನಡೆಯುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಪ್ರತಿಭಟಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಪ್ರತಿಭಟನೆಯಲ್ಲಿ ಭಾಗವಹಿಸಲಿದೆ. ಆದರೆ, ಸರ್ಕಾರ ಬಂದ್‍ಗೆ ಬೆಂಬಲ ನೀಡುತ್ತಿಲ್ಲ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.


[poll id=”21″]


ವಿಪಕ್ಷಗಳಿಗೆ ತರಾಟೆ:

ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ವಿರೋಧ ಪಕ್ಷಗಳು ದುರುದ್ದೇಶ ಪೂರ್ವಕವಾಗಿ ರಾಜಕಾರಣ ಮಾಡಿದವು ಮತ್ತು ಜಾತಿಯ ಬಣ್ಣ ಕಟ್ಟಿದವು. ಆದರೆ ಈಗ ಸತ್ಯಾಂಶ ಬಯಲಾಗಿದೆ. ಪ್ರಕರಣವನ್ನು ಆರಂಭದಲ್ಲೇ ಪರಿಶೀಲನೆ ನಡೆಸಿದ ನಗರ ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ, ಅದನ್ನು ಅಲ್ಲಗಳೆದಿದ್ದ ವಿಪಕ್ಷಗಳು ಕೊಲೆ ಎಂದು ಅಪಪ್ರಚಾರ ಮಾಡಿದ್ದವು. ಜಾತಿಯ ಬಣ್ಣ ಕಟ್ಟಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ವಾಸ್ತವಾಂಶ ಹೊರ ಬರಲಿ ಎಂಬ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. 20 ತಿಂಗಳ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ಈಗ ವರದಿ ನೀಡಿದೆ. ವರದಿ ನಮ್ಮ ಕೈ ಸೇರಿಲ್ಲ. ಅದನ್ನು ನಾನು ಓದಿಲ್ಲ. ಆದರೆ, ಪ್ರಾಥಮಿಕ ಮಾಹಿತಿಯ ಪ್ರಕಾರ ಡಿ.ಕೆ.ರವಿ ಅವರದ್ದು ಆತ್ಮಹತ್ಯೆ ಪ್ರಕರಣ, ಕೊಲೆಯಲ್ಲ ಎಂದು ಸ್ಪಷ್ಟವಾಗಿದೆ. ಈಗಲಾದರೂ ವಿಪಕ್ಷಗಳು ಇಂತಹ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಬಿಡಬೇಕು ಎಂದು ಅವರು ತಿರುಗೇಟು ನೀಡಿದರು.

Ambedker-1

ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ವಿಧಾನಸೌಧದ ಸಮೀಪವಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಸುರಕ್ಷತೆ ದೃಷ್ಟಿಯಿಂದ ಸ್ವಲ್ಪ ಮುಂದಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ ಪ್ರತಿಮೆಯನ್ನು ಮೂಲ ಸ್ಥಳದಲ್ಲೇ ಮರು ಸ್ಥಾಪಿಸಲಾಗಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನ ಇದೇ ದಿನ ದೇಶಕ್ಕೆ ಸಮರ್ಪಿಸಲಾಯಿತು. ಇದೇ ದಿನ ದೇಶಾದ್ಯಂತ ಸಮರ್ಪಣಾ ದಿನ ಆಚರಿಸಲಾಗುತ್ತಿದೆ. ಇದೇ ದಿನ ಪ್ರತಿಮೆಯನ್ನು ಮೂಲ ಸ್ಥಳದಲ್ಲೇ ಮರು ಅನಾವರಣಗೊಳಿಸಲಾಗಿದೆ ಎಂದು ಸಿಎಂ ಹೇಳಿದರು. ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಗಾಗಿ ಸದಾಶಿವ ಆಯೋಗ ಜಾರಿ ಸಂಬಂಧ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳಿಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ನಿರಾಕರಿಸಿದರು. ಪ್ರತಿಮೆ ಅನಾವರಣದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಭಾರತ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞೆಯನ್ನು ಸಚಿವರು ಹಾಗೂ ಸಿಬ್ಬಂದಿಗಳಿಗೆ ಬೋಧಿಸಿದರು.

ಭಾರತ ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಗಣರಾಜ್ಯವಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ನ್ಯಾಯ ಪಡೆಯಲು ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ, ಉಪಾಸನ, ಸ್ವಾತಂತ್ರ್ಯ, ಸಮಾನತೆ ಪಡೆಯಲು ಸಂವಿಧಾನವನ್ನು ಅಂಗೀಕರಿಸಲಾಗಿದೆ. ಅದನ್ನು ಶಿರಸಾ ಪಾಲಿಸುತ್ತೇನೆ ಎಂದು ಸಚಿವಾಲಯದ ಸಿಬ್ಬಂದಿಗಳಿಗೆ ಸಿಎಂ ಪ್ರತಿಜ್ಞಾ ವಿಧಿ ಬೋಧಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ಎಚ್.ಆಂಜನೇಯ, ಡಾ. ಎಚ್.ಸಿ.ಮಹದೇವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Sri Raghav

Admin