ಭಾರಿ ಕುತೂಹಲ ಕೆರಳಿಸಿದೆ ಅಮಿತ್ ಷಾ-ನಿರ್ಮಲಾನಂದನಾಥ ಶ್ರೀ ಭೇಟಿ..!

Amith-Shah--001

ಬೆಂಗಳೂರು,ಆ.11-ನಾಳೆಯಿಂದ ಮೂರು ದಿನಗಳ ಕಾಲ ಬೆಂಗಳೂರಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಒಕ್ಕಲಿಗ ಸಮುದಾಯದ ಧಾರ್ಮಿಕ ಗುರು ಹಾಗೂ ಆದಿಚುಂಚನಗಿರಿ ಪೀಠದ ಅಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡುತ್ತಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.  ಭಾನುವಾರ ಬೆಳಗ್ಗೆ 11.30ಕ್ಕೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠದ ಕಾಲಭೈರವೇಶ್ವರನ ಸನ್ನಿಧಾನಕ್ಕೆ ಅಮಿತ್ ಷಾ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳಿಂದ ಆಶೀರ್ವಾದ ಪಡೆಯಲಿದ್ದಾರೆ.

ಇತ್ತೀಚೆಗಷ್ಟೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಸಂಬಂಧಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಬೆಳವಣಿಗೆಗಳ ನಡುವೆಯೇ ಅಮಿತ್ ಷಾ ಆದಿಚುಂಚನಗಿರಿ ಪೀಠಕ್ಕೆ ಭೇಟಿ ನೀಡುತ್ತಿರುವುದು ಹೊಸ ರಾಜಕೀಯ ಸಮೀಕರಣಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.  ಒಕ್ಕಲಿಗ ಸಮುದಾಯ ಬಹುತೇಕ ಜೆಡಿಎಸ್ ಹಾಗೂ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದೆ. ಈ ಸಮುದಾಯದ ಮತಗಳನ್ನು ಸೆಳೆಯಲು ನಾನಾ ತಂತ್ರ ರೂಪಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮತ ಗಳಿಕೆ ಸಾಧ್ಯವಾಗಿಲ್ಲ. ಈಗಲೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಈ ಸಮುದಾಯದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.

ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯದ ಪ್ರಭಾವಿ ಒಕ್ಕಲಿಗ ಸಮಾಜದ ನಾಯಕ ಎಸ್.ಎಂ.ಕೃಷ್ಣ , ಬಿಜೆಪಿಗೆ ಸೇರ್ಪಡೆಯಾಗಿದ್ದರೂ ಕಮಲ ಪಕ್ಷಕ್ಕೆ ಅಂತಹ ಹೇಳಿಕೊಳ್ಳುವ ಲಾಭವೇನೂ ಆಗಿಲ್ಲ.  ಇನ್ನು ಯುವ ನಾಯಕ ಆರ್.ಅಶೋಕ್‍ಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡಿದ್ದರೂ ಮೈಸೂರು ಭಾಗದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಒಕ್ಕಲಿಗ ಮತಗಳು ಪ್ರಾಬಲ್ಯವಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಸಾಧನೆ ಈಗಲೂ 6ಕ್ಕೂ ಏರಿಲ್ಲ. ಮೂರಕ್ಕೂ ಇಳಿದಿಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಾದರೆ ಮೈಸೂರು ಭಾಗದಲ್ಲೂ ಕಮಲ ಅರಳಿಸುವುದು ಈ ನಾಯಕರ ಲೆಕ್ಕಾಚಾರವಾಗಿದೆ.  2013ರ ವಿಧಾನಸಭೆ ಚುನಾವಣೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಸಾಧನೆ ತೀರಾ ಕಳಪೆಯಾಗಿದೆ. ಅಲ್ಲಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳು, ಮೈಸೂರು ಲೋಕಸಭಾ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊರತುಪಡಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿತ್ತು.

ಇದನ್ನು ಗಮನದಲ್ಲಿಟ್ಟುಕೊಂಡೇ ಅಮಿತ್ ಷಾ ಭಾನುವಾರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಮಠಕ್ಕೆ ಆಗಮಿಸಲಿರುವ ಅವರನ್ನು ಕುಂಭಮೇಳ ಸ್ವಾಗತದ ಮೂಲಕ ಬರ ಮಾಡಿಕೊಳ್ಳಲಿದ್ದಾರೆ.  ಬಿಜೆಪಿ ರಾಜ್ಯ ಸಹವಕ್ತಾರ ಎ.ಎಚ್.ಆನಂದ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ರವೀಂದ್ರ ಅವರಿಗೆ ಕಾರ್ಯಕ್ರಮದ ಉಸ್ತುವಾರಿ ನೀಡಲಾಗಿದೆ.

ಇದೇ ವೇಳೆ ಅಮಿತ್ ಷಾ ಅವರು ಆದಿಚುಂಚನಗಿರಿ ಪೀಠದ ಅಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಶ್ರೀಗಳ ಕುರಿತ ಸ್ಟೋರಿ ಆಫ್ ಗುರು ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ನಂತರ 1.30ರಿಂದ 2.30ರವರೆಗೆ ಶ್ರೀಗಳ ಜೊತೆ ಮಾತುಕತೆ ನಡೆಸುವರು.   ಬಳಿಕ 2.30ರಿಂದ 3.30ರವರೆಗೆ ಅದಿಚುಂಚನಗಿರಿ ಕಾಲೇಜಿನ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲಿದ್ದಾರೆ. ನಿರ್ಮಲಾನಂದನಾಥ ಶ್ರೀಗಳನ್ನು ಅಮಿತ್ ಷಾ ಭೇಟಿ ಮಾಡುತ್ತಿರುವುದು ನಾನಾ ಕಾರಣಗಳನ್ನು ಹುಟ್ಟು ಹಾಕಿದೆ.

Sri Raghav

Admin