ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ : ಮತ್ತಿಬ್ಬರ ಅರೆಸ್ಟ್, ನದಿಯಲ್ಲಿ ಸಿಕ್ಕ ಮೂಳೆಗಳು

Udupiಬೆಂಗಳೂರು, ಆ.11- ಉಡುಪಿ ಹೊಟೇಲ್ ಉದ್ಯಮಿ ಭಾಸ್ಕರ್‍ಶೆಟ್ಟಿ ಅವರ ಕೊಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದು, ಅವರನ್ನು ವಿಚಾರಣೆಗೊಳ ಪಡಿಸಿದ್ದಾರೆ.  ಪ್ರಕರಣದ ಆರೋಪಿಯಾಗಿರುವ ನಿರಂಜನ್‍ಭಟ್ ತಂದೆ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ಭಟ್ ಬಂಧಿತ ಆರೋಪಿಗಳು.  ಮೃತದೇಹದ ಅವಶೇಷಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದ ಸಂದರ್ಭದಲ್ಲಿ ಹೊಳೆ ಬಳಿ ಸಿಕ್ಕಿದ ಮೂಳೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.   ಭಾಸ್ಕರ್‍ಶೆಟ್ಟಿ ಮೃತದೇಹವನ್ನು ಹೋಮಕುಂಡದ ಬಳಿ  ಪೆಟ್ರೋಲ್ ಹಾಕಿ ಸುಟ್ಟ ನಂತರ ಶವದ ಅವಶೇಷಗಳನ್ನು  12ಕಿಲೋ ಮೀಟರ್ ದೂರ ಕೊಂಡೊಯ್ದು ಕಲ್ಕಾರ್ ಹೊಳೆಯಲ್ಲಿ ಬಿಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಭಾಸ್ಕರ್‍ಶೆಟ್ಟಿ ಪತ್ನಿ ರಾಜೇಶ್ವರಿ ಕುಟುಂಬದ ಸ್ನೇಹಿತ ನಿರಂಜನ್‍ಭಟ್  ನನ್ನು ಬಂಧಿಸಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಹಲವಾರು ವಿಷಯಗಳು ಬೆಳಕಿಗೆ ಬಂದಿದ್ದು, ನಿರಂಜನ್‍ಭಟ್ ಅವರ ತಂದೆ ಕೂಡ ಕೊಲೆಗೆ ಸಹಕರಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತಂದೆ ಶ್ರೀನಿವಾಸ ಭಟ್ ಹಾಗೂ ಚಾಲಕ ರಾಘವೇಂದ್ರ ಭಟ್ ಅವರನ್ನು ಬಂಧಿಸಿದ್ದಾರೆ.
ಕಲ್ಕಾರ ಹೊಳೆ ಬಳಿ ಇಂದು ಶವದ ಅವಶೇಷಗಳಿಗೆ ಜಾಲಾಡಿದ ಪೊಲೀಸರಿಗೆ ಕೆಲ ಮೂಳೆಗಳು ಪತ್ತೆಯಾಗಿದ್ದು, ಆ ಮೂಳೆಗಳು ಕೊಲೆಯಾದ ಭಾಸ್ಕರ್‍ಶೆಟ್ಟಿಯವೇ ಎಂಬುದನ್ನು ದೃಢಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.   ದಿಢೀರ್ ಬೆಳವಣಿಗೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ವೃತ್ತ ನಿರೀಕ್ಷಕ ಗಿರೀಶ್ ಅವರನ್ನು ಬದಲಾಯಿಸಿ ಡಿವೈಎಸ್‍ಪಿ ಸುನಿತಾ ಅವರನ್ನು ನೇಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದು, ಅವರು ಇಂದಿನಿಂದಲೇ ತನಿಖೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.  ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್‍ಶೆಟ್ಟಿ ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಅವರಿಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ನಿನ್ನೆ ಆರೋಪಿಗಳನ್ನು ಪೊಲೀಸ್ ಜೀಪ್‍ನಲ್ಲಿ ಕರೆತರುವಾಗ ಪೊಲೀಸ್ ಅಧಿಕಾರಿಗಳು ಅವರನ್ನು ಮುಂದಿನ ಸೀಟಿನಲ್ಲಿ ಕೂರಿಸಿಕೊಂಡು ಬಂದಿದ್ದರು. ಇದು ಮಾಧ್ಯಮಗಳಲ್ಲಿ ಪ್ರಚಾರವಾಗಿ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ಹೀಗಾಗಿ ತನಿಖಾಧಿಕಾರಿಯನ್ನು ಬದಲಾಯಿಸಲಾಗಿದೆ.

ಜುಲೈ 28ರಂದು ಭಾಸ್ಕರ್‍ಶೆಟ್ಟಿ ಹತ್ಯೆ ನಡೆದ ಪ್ರಕರಣ ಬೆಳಕಿಗೆ ಬಂದಿತ್ತು. ಇದಕ್ಕೂ ಐದು ದಿನ ಮುಂಚೆ ಅವರು ಕಾಣೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಅವರ ಮನೆಯವರು ಯಾರನ್ನೋ ಮದುವೆಯಾಗಿ ಹೋಗಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ಕೌಟುಂಬಿಕ ಕಲಹವಿದ್ದ ಕಾರಣ ಇಲ್ಲಿನ ಜನರಲ್ಲಿ ಅನುಮಾನವಿತ್ತು. ಭಾಸ್ಕರ್‍ಶೆಟ್ಟಿ ಕಾಣೆಯಾಗಿಲ್ಲ, ಕೊಲೆಯಾಗಿರಬಹುದು ಎಂದು ಶಂಕಿಸಲಾಗಿತ್ತು.  ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಉಡುಪಿ ಪೊಲೀಸರಿಗೆ ಭಾಸ್ಕರ್‍ಶೆಟ್ಟಿ ಕೊಲೆಯಾದ ಮಾಹಿತಿ ದೊರೆಯುತ್ತಿದ್ದಂತೆ ತನಿಖೆ ಚುರುಕುಗೊಳಿಸಿ ಕೊಲೆಗೆ ಕಾರಣವಾದ ಪತ್ನಿ, ಪುತ್ರ, ಸ್ನೇಹಿತ ನಿರಂಜನ್ ಭಟ್ ಅವರನ್ನು ಬಂಧಿಸಿದ್ದರು.

ಕುಟುಂಬ ಕಲಹ:

ಈ ಕುಟುಂಬದಲ್ಲಿ ರಾಜೇಶ್ವರಿ ಹಾಗೂ ಭಾಸ್ಕರ್‍ಶೆಟ್ಟಿ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದ್ದು, ಆಗಾಗ್ಗೆ ಇವರ ನಡುವೆ ಜಗಳ ನಡೆಯುತ್ತಿತ್ತು. ಇವರ ಕುಟುಂಬದ ಸ್ನೇಹಿತರಾದ ನಿರಂಜನ್‍ಭಟ್ ಮಾಟ-ಮಂತ್ರದ ನೆಪದಲ್ಲಿ ರಾಜೇಶ್ವರಿಯನ್ನು ಎಲ್ಲೆಲ್ಲಿಗೋ ಕರೆದೊಯ್ಯುತ್ತಿದ್ದ. ಈ ವಿಷಯ ತಿಳಿದ ಭಾಸ್ಕರ್‍ಶೆಟ್ಟಿ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಕಳೆದ ಒಂದೂವರೆ ತಿಂಗಳ ಹಿಂದೆ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಪೊಲೀಸರು ಮುಚ್ಚಳಿಕೆ ಬರೆದುಕೊಂಡು ಕಳುಹಿಸಿದ್ದರು. ಹೆಂಡತಿಯ ವರ್ತನೆಯಿಂದ ಬೇಸತ್ತಿದ್ದ ಭಾಸ್ಕರ್‍ಶೆಟ್ಟಿ ಅವರಿಂದ ಬಿಡುಗಡೆ ಪಡೆಯಲು ಬಯಸಿದ್ದ ಎಂದು ತಿಳಿದುಬಂದಿತ್ತು. ಎಲ್ಲಿ ಆಸ್ತಿ ಕೈಬಿಟ್ಟು ಹೋಗುತ್ತದೆಯೋ, ಐಶಾರಾಮಿ ಬದುಕಿಗೆ ಧಕ್ಕೆಯಾಗುತ್ತದೆಯೋ ಎಂಬ ಹಿನ್ನೆಲೆಯಲ್ಲಿ ಪತ್ನಿ-ಮಗ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ, ನಿರಂಜನ್‍ಭಟ್ ಇದಕ್ಕೆ ಸಹಕರಿಸಿದ್ದಾರೆ ಎನ್ನಲಾಗಿದೆಯಾದರೂ ಕೇವಲ ಹೆಂಡತಿ-ಮಗನಿಂದಷ್ಟೆ ಈ ಕೊಲೆ ನಡೆದಿರುವ ಸಾಧ್ಯತೆಯಿಲ್ಲ. ಒಂದು ತಂಡವೇ ಸೇರಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin