ಭೀಕರ ರಸ್ತೆ ಅಪಘಾತ : ಸಿಗಂದೂರೇಶ್ವರಿ ದರ್ಶನ ಪಡೆದು ವಾಪಸಾಗುತ್ತಿದ್ದ 7 ಮಂದಿ ಮಸಣಕ್ಕೆ
ತುಮಕೂರು, ಮೇ 21- ಕ್ಷಣ ಹೊತ್ತು ಕಳೆದಿದ್ದರೆ ಎಲ್ಲರೂ ಸುರಕ್ಷಿತವಾಗಿ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳುತ್ತಿದ್ದರು. ಆದರೆ, ವಿಧಿ ಹಾಗಾಗಲು ಬಿಡಲಿಲ್ಲ. ಜವರಾಯನಂತೆ ರಸ್ತೆ ಬದಿ ನಿಂತಿದ್ದ ಲಾರಿ ಏಳು ಮಂದಿಯನ್ನು ಬಲಿ ತೆಗೆದುಕೊಂಡ ದಾರುಣ ಘಟನೆ ಶಿರಾ ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದೆ. ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನ ಪಡೆದು ವಾಪಸಾಗುತ್ತಿದ್ದ ಖಾಸಗಿ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿ 19ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿರಾ ಹಾಗೂ ಪಟ್ಟನಾಯಕನಹಳ್ಳಿ ನಿವಾಸಿಗಳಾದ ಅನುಷಾ (7), ರತ್ನಮ್ಮ (38), ಸವಿತಾ (21), ಸುಮಲತಾ (21), ಗಿರಿಜಮ್ಮ (50), ಶಂಕರ (35), ಅಶ್ವತ್ಥ ನಾರಾಯಣ (40) ಮೃತಪಟ್ಟ ದುರ್ದೈವಿಗಳು.
ಕಳೆದ 19ರಂದು ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಖಾಸಗಿ ಬಸ್ನಲ್ಲಿ ತೆರಳಿ ದೇವಿಯ ದರ್ಶನ ಪಡೆದು ತಮ್ಮ ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾಗ ರಾತ್ರಿ 11ರ ಸಮಯದಲ್ಲಿ ಶಿರಾ ಸಮೀಪದ ಜೈ ಹಿಂದ್ ಡಾಬಾ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಬಸ್ ಚಾಲಕನ ಗಮನಕ್ಕೆ ಬಾರದೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಏಳು ಮಂದಿ ಸಾವನ್ನಪ್ಪಿದರೆ, 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದು, 9 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ತುಮಕೂರು, ಶಿರಾ ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ದೇಹಗಳು ಬಸ್ನಲ್ಲಿ ಕಚ್ಚಿಕೊಂಡಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶವಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತುರ್ತು ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಮಾಲಿನಿ, ಡಾ.ಸಿದ್ದೇಶ್ವರ್, ಡಾ.ರಾಘವೇಂದ್ರ, ಡಾ.ಮಂಜುನಾಥ್ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ದೌಡಾಯಿಸಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಕಳುಹಿಸಲಾಯಿತು. ಬಸ್ ಕೆಳಗೆ ಸಿಲುಕಿಕೊಂಡಿದ್ದ ಕುಸುಮಾ (6) ಎಂಬ ಬಾಲಕಿ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ವೆಂಕಟೇಶ್, ಶಿರಾ ಇನ್ಸ್ಪೆಕ್ಟರ್ ಲಕ್ಷ್ಮಯ್ಯ ಸೇರಿದಂತೆ ಹಲವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತ್ಯನಾರಾಯಣ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ.