ಮಕ್ಕಳ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಗಲ್ಲು ಶಿಕ್ಷೆ
ನವದೆಹಲಿ, ಏ.21-ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಸುಗ್ರೀವಾಜ್ಞೆ ಜಾರಿಗೆ ತರುವ ಬಗ್ಗೆ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಮಹತ್ವದ ಚರ್ಚೆ ನಡೆಸಲಿದೆ. ದೇಶದಲ್ಲಿ ಇತ್ತೀಚೆಗೆ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕಗ್ಗೊಲೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಕತುವಾ, ಸೂರತ್, ಲಕ್ನೋ, ಕಬೀರ್ಧಾಮ್, ಇಂದೋರ್ಗಳಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ನಡೆಯುವ ಸಂಪುಟ ಸಭೈ ಮಹತ್ವದ್ದಾಗಿದೆ. ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ದೇಶಾದ್ಯಂತ ವ್ಯಾಪಕ ಒತ್ತಾಯ ಹೆಚ್ಚುತ್ತಿರುವ ಸಂದರ್ಭದಲ್ಲೇ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬಗ್ಗೆ ಸಂಪುಟ ಸಭೈಯಲ್ಲಿ ಮಹತ್ವದ ಚರ್ಚೆ ನಡೆಸಲಿದೆ.
ಅತ್ಯಾಚಾರಿಗಳಿಗೆ ಪ್ರಸ್ತುತ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸು ಕಾಯ್ದೆ) ಅಧಿನಿಯಮದ ಅಡಿ ಜೀವಾವಧಿ ಶಿಕ್ಷೆ ಮಾತ್ರ ವಿಧಿಸಲು ಅವಕಾಶ ಇದೆ. ಈ ಕಾಯ್ದೆಗೆ ತಿದ್ದುಪಡಿ ತಂದು ಗಲ್ಲು ಶಿಕ್ಷೆಯನ್ನೂ ಅದರಲ್ಲಿ ಸೇರಿಸಲು ಸುಗ್ರೀವಾಜ್ಞೆ ತರಬೇಕು ಎಂಬುದು ಸಾರ್ವತ್ರಿಕ ಆಗ್ರಹವಾಗಿದೆ. ಈ ಎಲ್ಲ ಅಂಶಗಳನ್ನು ಸರ್ಕಾರ ಪರಿಗಣಿಸಿದ್ದು, ಸಂಪುಟ ಸಭೈಯಲ್ಲಿ ಚರ್ಚಿಸಲಿದೆ. ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ದುಷ್ಕರ್ಮಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸುವ ಜೊತೆಗೆ ಇಂಥ ಕೃತ್ಯಗಳು ಮರುಕಳಿಸುವುದನ್ನು ತಡೆಗಟ್ಟಲು ಸರ್ಕಾರ ಉದ್ದೇಶಿಸಿದೆ.