ಮಗುವಿನ ಶಿರಚ್ಛೇದ ಮಾಡಿ,ಮರ್ಮಾಂಗ ಕತ್ತರಿಸಿ, ಕೈಕಾಲು ತುಂಡರಿಸಿ ಚರಂಡಿಗೆ ಎಸೆದ ಕಟುಕರು..!
ಮೈಸೂರು, ಅ.21-ದುಷ್ಕರ್ಮಿಗಳು ಎರಡು ವರ್ಷದ ಮಗುವಿನ ರುಂಡ ಬೇರ್ಪಡಿಸಿ ಒಂದು ಕೈ, ಒಂದು ಕಾಲು ಕತ್ತರಿಸಿದ ಮುಂಡವನ್ನು ಚರಂಡಿಯಲ್ಲಿ ಬಿಸಾಡಿರುವ ಅಮಾನವೀಯ ಘಟನೆ ಸಾಂಸ್ಕೃತಿಕ ನಗರಿಯ ಜನತೆಯನ್ನು ಬೆಚ್ಚಿಬೀಳಿಸಿದೆ. ನೀಚರಿಂದ ಕೊಲೆಯಾಗಿರುವ ಮಗುವಿಗೆ ಸುಮಾರು ಎರಡು ವರ್ಷವಿರಬಹುದು. ಹೆಣ್ಣು-ಗಂಡೋ ಎಂಬುದು ಸಹ ಗೊತ್ತಾಗಬಾರದೆಂದು ದುಷ್ಕರ್ಮಿಗಳು ಮರ್ಮಾಂಗವನ್ನು ಕತ್ತರಿಸಿದ್ದಾರೆ. ಇಂದು ಮುಂಜಾನೆ ಎನ್ಆರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಚರಂಡಿಯೊಂದರ ಬಳಿ ನಾಯಿಗಳು ಬೊಗಳುತ್ತಿದ್ದುದನ್ನು ಗಮನಿಸಿ ಸ್ಥಳೀಯರು ಸಮೀಪ ಹೋಗಿ ನೋಡಿದಾಗ ರುಂಡವಿಲ್ಲದ ಮಗುವಿನ ದೇಹ ಪತ್ತೆಯಾಗಿದೆ.
ತಕ್ಷಣ ಸಾರ್ವಜನಿಕರು ಎನ್.ಆರ್.ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ರುಂಡವಿಲ್ಲದ ಮುಂಡವನ್ನು ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಮಗುವಿನ ರುಂಡ, ಒಂದು ಕೈ-ಕಾಲಿಗಾಗಿ ಹಾಗೂ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.