ಮಗು ಅಳುವುದನ್ನು ನಿಲ್ಲಿಸದಿದ್ದಕ್ಕೆ ರೊಚ್ಚಿಗೆದ್ದು ಕತ್ತು ಹಿಸುಕಿ ಕೊಂದ..!
ಇಂದೋರ್, ಅ.19- ನಮ್ಮ ಸಮಾಜದಲ್ಲಿ ಇಂತಹ ಕ್ರೂರಿಗಳೂ ಇರುತ್ತಾರೆ ಎನ್ನುವುದಕ್ಕೆ ನಿದರ್ಶನದಂತಿದೆ ಈ ಸುದ್ದಿ. ಒಂದೇ ಸಮನೆ ಅಳುತ್ತಿದ್ದ ಹೆಣ್ಣು ಮಗುವನ್ನು ಸಮಾಧಾನ ಪಡಿಸಲಾಗದೆ ಕೋಪಗೊಂಡ ಸೋದರ ಮಾವ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನ ಚಂದನ್ ನಗರದಲ್ಲಿ ನಡೆದಿದೆ. ದಿಲೀಪ್ ಬಾಡಿಯಾ ಎಂಬಾತನೇ ತನ್ನ 3 ವರ್ಷದ ಸೊಸೆಯನ್ನು ಕೊಂದ ಆರೋಪಿ. ದಿಲೀಪ್ನ ಸಹೋದರಿ ಜಾನಿ ದಾವರ್ ತನ್ನ ಮೂರು ವರ್ಷದ ಕಂದನನ್ನು ತನ್ನ ಸಹೋದರನ ಸುಪರ್ದಿಗೆ ಬಿಟ್ಟು ಕೆಲಸಕ್ಕೆ ತೆರಳಿದ್ದಳು. ಆದರೆ ತಾಯಿ ಹೊರಟು ಹೋದ ಸ್ವಲ್ಪ ಹೊತ್ತಿನ ನಂತರ ತನಗೆ ಅಮ್ಮ ಬೇಕು ಎಂದು ಮಗು ರಚ್ಚೆ ಹಿಡಿದು ಅಳಲಾರಂಭಿಸಿದೆ. ಈ ವೇಳೆ ಮಾವ ದಿಲೀಪ್ ಮಗುವನ್ನು ಸಮಾಧಾನಿಸಲು ಸಾಕಷ್ಟು ಶ್ರಮಿಸಿದ್ದಾನೆ. ಆದರೆ ಮಗು ಅಳು ನಿಲ್ಲಿಸಿಲ್ಲ. ಇದರಿಂದ ಧೃತಿಗೆಟ್ಟ ದಿಲೀಪ್ ಮಗುವಿನ ಕತ್ತು ಹಿಸುಕಿದ್ದಾನೆ.
ಅಕ್ಟೋಬರ್ 16ರಂದು ಈ ಘಟನೆ ನಡೆದಿದೆ. ಘಟನೆ ಸಂಬಂಧ ಮಗುವಿನ ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ಮರೆ ಮಾಚಲು ಆರೋಪಿ ಯತ್ನಿಸಿದ್ದು, ಮಗುವಿಗೆ ಹುಷಾರಿರಲಿಲ್ಲ. ವಾಂತಿ ಮಾಡಿತ್ತು ಎಂದು ಮಗುವಿನ ಪೋಷಕರಿಗೆ ಹೇಳಿದ್ದ, ಅಲ್ಲದೇ ಆತ, ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ವೈದ್ಯರು ಅಲ್ಲಿ ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ ಮಗುವಿನ ಸಾವಿನ ಕಾರಣ ತಿಳಿದ ವೈದ್ಯರು ಪೋ ಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಪೋ ಲೀಸರು ಅಲ್ಲಿಗೆ ತಲುಪುವ ಮೊದಲೇ ಮರಣೋತ್ತರ ಪರೀಕ್ಷೆ ಮಾಡದೆಯೇ ಮಗುವಿನ ಮೃತದೇಹದೊಂದಿಗೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದು, ಬಳಿಕ ಪೊಲೀಸರು ಆತನ ನಿವಾಸಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಸುನೀಲ್ ಪಟಿದಾರ್ ಹೇಳಿದ್ದಾರೆ.