ಮತೀಯ ಸಂಘರ್ಷದಿಂದ ಅಧಿಕಾರ ಹಿಡಿಯಲು ಬಿಜೆಪಿ ಹುನ್ನಾರ: ರಾಮಲಿಂಗಾರೆಡ್ಡಿ ಕಿಡಿ

Ramalingareddy--01

ಬೆಂಗಳೂರು, ಸೆ.5- ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯದ ರೈತರ ಸಾಲ ಮನ್ನಾ ಮಾಡಿಸುವುದು, ಬರಗಾಲಕ್ಕೆ ಸೂಕ್ತ ಪರಿಹಾರ ಕೊಡಿಸುವಂತಹ ಕೆಲಸ ಮಾಡದೆ ಮತೀಯ ಗಲಭೆಗಳನ್ನು ಪ್ರಚೋದಿಸುವ ಮೂಲಕ ಬಿಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಮಂಗಳೂರು ಚಲೊ ಬೈಕ್ ರಾಲಿಯ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರಲ್ಲದೆ, ಇದುವರೆಗೂ ರಾಜ್ಯದ ಜನರ ಪರವಾಗಿ ಕೆಲಸ ಮಾಡದೆ ಇದ್ದವರು ಈಗ ಇಂತಹ ಕಾರ್ಯಕ್ರಮಗಳ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಆದರೆ, ಅದು ಯಶಸ್ವಿಯಾಗುವುದಿಲ್ಲ ಎಂದರು.

ಇಷ್ಟು ದಿನ ಇವರು ಸುಮ್ಮನೇ ಇದ್ದರು. ಆದರೆ ಯಾವಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬಂದು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹೀಗೆ ಸರಿಯಾಗಿದ್ದರೆ ನಾವು ಗೆಲ್ಲುವುದು ಹೇಗೆ? ಹೀಗಾಗಿ ಅದನ್ನು ಹೇಗಾದರೂ ಮಾಡಿ ಹದಗೆಡಿಸಿ ಎಂದು ಹೇಳಿ ಹೋಗಿದ್ದಾರೆ. ಅದಕ್ಕಾಗಿ ಇವರು ದಿಢೀರನೆ ಎಚ್ಚೆತ್ತು ಇಂತಹ ಕೆಲಸ ಮಾಡಲು ಹೊರಟಿದ್ದಾರೆ ಎಂದರು.

ಬಿಜೆಪಿಯ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಮಾಹಿತಿ ಕೇಳಿದರೆ ಇವರಿಗೆ ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ರಾಜ್ಯದ ಐದು ಭಾಗದಿಂದ ಇವರು ಬೈಕುಗಳಲ್ಲಿ ಹೊರಟರೆ, ಅದರಲ್ಲಿ ಎಷ್ಟು ಜನ ಹೊರಡುತ್ತಾರೆ? ಎಷ್ಟು ಜನ ಬಂದು ಸೇರಿಕೊಳ್ಳುತ್ತಾರೆ? ಎಂಬ ಕುರಿತು ಮಾಹಿತಿ ಬೇಕಲ್ಲ? ಅದನ್ನು ಕೊಡಲು ಆಗಿಲ್ಲವೆಂದರೆ ಅನುಮತಿ ಕೊಡುವುದು ಹೇಗೆ ಎಂದು ಪ್ರಶ್ನಿಸಿದರು.
ಕಾನೂನಿಗೆ ಎಲ್ಲರೂ ಒಂದೇ. ಪ್ರತಿಯೊಂದು ಪಕ್ಷವೂ, ವ್ಯಕ್ತಿಯೂ ಕಾನೂನನ್ನು ಗೌರವಿಸಲೇಬೇಕು. ಒಂದು ವೇಳೆ ಕಾನೂನನ್ನು ಉಲ್ಲಂಘಿಸುತ್ತೇವೆ ಎಂದು ಯಾರೇ ಹೊರಟರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇವರ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ? ಹರಿಯಾಣದಲ್ಲಿ ನಡೆದ ಗಲಭೆಗೆ ಒಂದೂವರೆ ಲಕ್ಷ ಮಂದಿ ಸೇರಲು ಅವಕಾಶ ಮಾಡಿಕೊಟ್ಟಿದ್ದೇ ಕಾರಣ. ಹಾಗೆ ಜನ ಸೇರಲು ಅನುಮತಿ ನೀಡಿದ್ದಕ್ಕೆ ಮೂವತ್ತೇಳು ಮಂದಿ ಸಾವಿಗೀಡಾದರು.
ಅಂತಹದೇ ಪರಿಸ್ಥಿತಿ ಇಲ್ಲಾಗಿದ್ದರೆ ಸರ್ಕಾರವನ್ನು ಜನ ಕೇಳುತ್ತಾರೆ. ಇದು ಆರೂವರೆ ಕೋಟಿ ಜನರ ಸರ್ಕಾರ. ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲರ ಪ್ರಾಣವೂ ಮುಖ್ಯ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಬಳ್ಳಾರಿಗೆ ಪಾದಯಾತ್ರೆ ಮಾಡಲು ಅನುಮತಿ ನೀಡಿತ್ತು ಎಂಬುದು ನಿಜ. ಆದರೆ ಆ ಸಂದರ್ಭದಲ್ಲಿ ರಾಜ್ಯದಾದ್ಯಂತ  ಎಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲ. ಆದರೆ ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಗಲಭೆ ನಡೆದಿತ್ತು. ಪರಿಸ್ಥಿತಿ ಹದಗೆಟ್ಟಿತ್ತು. ಈಗ ಪರಿಸ್ಥಿತಿ ಶಾಂತವಾಗಿದೆ. ಹೀಗಿರುವಾಗ ಅದನ್ನು ಕೆಡಿಸಲು ಇವರು ಅಲ್ಲಿಗೆ ಹೋಗುತ್ತೇವೆ ಎಂದರೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದರು. ಇತ್ತೀಚೆಗೆ ನಡೆದ ಚುನಾವಣಾ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ 132 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಮಾಹಿತಿ ಬಂದ ಮೇಲೆ ಇವರಿಗೆ ಮತ್ತಷ್ಟು ಚಿಂತೆಯಾಗಿದೆ. ಇದು ಕೂಡ ಇಂತಹ ಕಾರ್ಯಕ್ರಮಗಳ ಹಿಂದಿರುವ ಕಾರಣಗಳಲ್ಲಿ ಒಂದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಾರ್ವಜನಿಕವಾಗಿ ಒಂದು ಗಣಪತಿ ಹಬ್ಬ ಮಾಡಲು ಅನುಮತಿ ಬೇಕು. ಹೀಗಿರುವಾಗ ಯಾರ ಅನುಮತಿಯೂ ಇಲ್ಲದೆ ಮಂಗಳೂರು ಚಲೋ ಮಾಡುತ್ತೇವೆ ಎಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು. ಮಹದಾಯಿ ನದಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸಿ ಎಂದರೆ ಇವರಿಗೆ ಪ್ರಧಾನಿಗಳ ಮುಂದೆ ಹೋಗಿ ನಿಲ್ಲಲು ಆಗುವುದಿಲ್ಲ. ಕಾವೇರಿ ನದಿ ನೀರಿನ ವಿಚಾರದಲ್ಲಿ ನ್ಯಾಯ ಕೊಡಿಸಿ ಎಂದರೆ ಆಗುವುದಿಲ್ಲ. ಸಾಲ ಮನ್ನಾ ಮಾಡಿಸಿ ಎಂದರೆ ಆಗುವುದಿಲ್ಲ. ಬರಗಾಲದ ಪರಿಹಾರಕ್ಕೆ ಮಹಾರಾಷ್ಟ್ರಕ್ಕೆ 8500 ಕೋಟಿ ರೂ. ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಬರೀ 1800 ಕೋಟಿ ರೂ. ಕೊಟ್ಟಿದ್ದಾರೆ. ಈ ತಾರತಮ್ಯ ನಿವಾರಿಸಲು ಹೇಳಿ ಎಂದರೆ ಆಗುವುದಿಲ್ಲ.

ಅದೆಲ್ಲವನ್ನೂ ಬಿಟ್ಟು ಮತೀಯ ಸಂಘರ್ಷಗಳನ್ನು ಹುಟ್ಟು ಹಾಕಿ ಅಧಿಕಾರ ಪಡೆಯಲು ಹುನ್ನಾರ ನಡೆಸಿದ್ದಾರೆ. ಆದರೆ, ಅದು ಯಾವ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ.ಮತೀಯ ಶಕ್ತಿಗಳು ಯಾವುದೇ ಇರಲಿ.ಮುಲಾಜಿಲ್ಲದೆ ಹತ್ತಿಕ್ಕಿ ಎಂದುಪೊಲೀಸರಿಗೆ ಆದೇಶ ನೀಡಲಾಗಿದೆ ಎಂದರು.
ಇದಕ್ಕೂ ಮುನ್ನ ಅವರು ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ರೂಪ್ ಕುಮಾರ್ ದತ್ತ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

Sri Raghav

Admin