ಮತ್ತಷ್ಟು ಸ್ವಾದಿಷ್ಟವಾಗಲಿದೆ ಸರ್ಕಾರಿ ಶಾಲೆಗಳ ಬಿಸಿಯೂಟ, ಹೇಗೆ ಗೊತ್ತೇ..?

Spread the love

Mid-Day-Meal-02

ಬೆಂಗಳೂರು, ಜ.9- ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಬಿಸಿಯೂಟ ಮತ್ತಷ್ಟು ಸ್ವಾದಿಷ್ಟವಾಗಲಿದ್ದು, ಸಿರಿಧಾನ್ಯ ಸೇರ್ಪಡೆಗೊಳಿಸುವ ಕುರಿತಂತೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಸಾವಯವ ಹಾಗೂ ಸಿರಿಧಾನ್ಯಗಳನ್ನು ಪೌಷ್ಠಿಕ ಆಹಾರವಾಗಿ ಬಳಸಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದ್ದು, ಇದರ ಮೊದಲ ಹೆಜ್ಜೆಯಾಗಿ ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಸಿರಿಧಾನ್ಯ ಆಹಾರ ವಿತರಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಗದರ್ಶನದ ಆಧಾರದ ಮೇರೆಗೆ ಮೊದಲ ಹಂತವಾಗಿ ನಗರದಲ್ಲಿರುವ ಸರ್ಕಾರಿ ಶಾಲೆಗಳ ಒಟ್ಟು 1000 ಮಕ್ಕಳಿಗೆ ಸಿರಿಧಾನ್ಯದಲ್ಲಿ ಮಾಡಿದ ಬಿಸಿಯೂಟವನ್ನು ನೀಡಲಾಗುತ್ತದೆ ಎನ್ನಲಾಗುತ್ತಿದೆ. ಜ.11 ರಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಶಾಲೆಯೊಂದರಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಯೋಜನೆ ಜಾರಿಗೊಂಡ ಬಳಿಕ ಸಿರಿಧಾನ್ಯದಿಂದ ಮಾಡಿದ ಬಿಸಿಯೂಟವನ್ನು ಸೇವಿಸಿದ 1,000 ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆಗಳನ್ನು 6-8 ತಿಂಗಳ ಕಾಲ ಪರಿಶೀಲನೆ ನಡೆಸಲಿದ್ದು, ವರದಿಯ ಆಧಾರದ ಮೇಲೆ ರಾಜ್ಯ ಎಲ್ಲಾ ಸರ್ಕಾರಿ ಶಾಲೆಗಳಿಗೂ ಇದರ ಯೋಜನೆ ತಲುಪುವಂತೆ ಮಾಡಲಾಗುತ್ತದೆ. ಪ್ರಸ್ತುತ ಸರ್ಕಾರಿ ಶಾಲೆಯ ಮಕ್ಕಳಿಗೆ ಅಕ್ಕಿ, ಗೋಧಿ, ಕಾಳುಗಳು ಹಾಗೂ ತರಕಾರಿಗಳಿಂದ ಮಾಡಿದ ಆಹಾರವನ್ನು ನೀಡಲಾಗುತ್ತಿದ್ದು, ಅಕ್ಕಿಯ ಬದಲಾಗಿ ಸಿರಿಧಾನ್ಯಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಇದಲ್ಲದೆ ಬುಧವಾರದಂದು ಮಕ್ಕಳಿಗೆ ನೀಡಲಾಗುತ್ತಿರುವ ಸಿಹಿ ಪದಾರ್ಥವನ್ನೂ ಕೂಡ ಸಿರಿಧಾನ್ಯ ಬಳಸಿ ಮಾಡಿದ ಸಿಹಿಯನ್ನೇ ನೀಡಲು ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಬಿಸಿಯೂಟ ಯೋಜನೆಯೊಂದಿಗೆ ಕೈಜೋಡಿಸಿರುವ ಲಾಭ ರಹಿತ ಸಂಸ್ಥೆ ಅಕ್ಷಯ ಪಾತ್ರೆ ಫೌಂಡೇಶನ್, ಈಗಾಗಲೇ ಹೈದರಾಬಾದ್ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಸಿರಿ ಧಾನ್ಯಗಳ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆಗಳ ಸಮಸ್ಯೆಗಳನ್ನು ದೂರವಾಗಿಸಿರುವ ಗುರಿಯೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದರಂತೆ ಆಧುನಿಕ ಆಹಾರ ಪದ್ಧತಿಯೊಂದಿಗೆ ಸಾಂಸ್ಕೃತಿಕ ಸಿರಿಧಾನ್ಯ ಪದ್ಧತಿಯನ್ನು ಸೇರ್ಪಡೆಗೊಳಿಸಲು ಮುಂದಾಗಿದೆ. ಸಿರಿಧಾನ್ಯದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿದ್ದು, ಇದು ಮಕ್ಕಳಲ್ಲಿ ಕಾಣಿಸುವ ಅಪೌಷ್ಠಿಕತೆ ಸಮಸ್ಯೆಯನ್ನು ದೂರಾಗಿಸುತ್ತವೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಬಿಸಿಯೂಟ ಯೋಜನೆಯಲ್ಲಿ ಸಿರಿಧಾನ್ಯಗಳನ್ನು ಸೇರ್ಪಡೆಗೊಳಿಸುವಂತೆ ನೀತಿ ಆಯೋಗ ಕೂಡ ಈ ಹಿಂದೆ ಸಲಹೆಯನ್ನು ನೀಡಿತ್ತು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin