ಮತ್ತೊಬ್ಬ ಭಾರತೀಯ ಸೇನಾಧಿಕಾರಿಯನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಉಗ್ರರು

Spread the love

Lt-Pakista-Terrorist--01

ಶ್ರೀನಗರ, ಮೇ 10-ಉಗ್ರರ ನೆರವಿನೊಂದಿಗೆ ಪಾಕಿಸ್ತಾನಿ ಸೈನಿಕರು ಭಾರತದ ಇಬ್ಬರು ಯೋಧರ ಶಿರಚ್ಛೇದನಗೈದು ಪೈಶಾಚಿಕ ಕೃತ್ಯ ಎಸಗಿದ ಘಟನೆ ಹಸಿರಾಗಿರುವಾಗಲೇ ಭಯೋತ್ಪಾದಕರು ಲೆಫ್ಟಿನೆಂಟ್ ದರ್ಜೆಯ ಸೇನಾಧಿಕಾರಿಯೊಬ್ಬರನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಾಶ್ಮೀರ ಕಣಿವೆಯಲ್ಲಿ ನಡೆದಿದೆ. ಈ ಘಟನೆಯಿಂದ ಭಾರತೀಯ ಸೇನಾ ಪಡೆ ಮತ್ತಷ್ಟು ಕೆರಳಿದ್ದು, ಮತ್ತೆ ದೊಡ್ಡ ಪ್ರಮಾಣದ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದೆ.   ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸೇನಾಧಿಕಾರಿ ಉಮರ್ ಫಯಾಜ್ ಅವರ ಶವ ಪತ್ತೆಯಾಗಿದ್ದು, ಅವರ ದೇಹದಲ್ಲಿ ಗುಂಡುಗಳು ಕಂಡುಬಂದಿವೆ.ಬಂಧುವೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಫಯಾಜ್‍ರನ್ನು ನಿನ್ನೆ ಉಗ್ರರು ಅಪಹರಿಸಿದ್ದರು. ಇಂದು ಬೆಳಗ್ಗೆ ಶೋಪಿಯಾನ್ ಜಿಲ್ಲೆಯ ಹರ್ಮೈನ್ ಪ್ರದೇಶದಲ್ಲಿ ಗುಂಡೇಟುಗಳಿಂದ ಮೃತದೇಹ ಪತ್ತೆಯಾಗಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.   ಕುಲ್ಗಾಂ ಪ್ರದೇಶದ ಉಮರ್ ಫಯಾಜ್ ಇತ್ತೀಚೆಗಷ್ಟೇ ಭಾರತೀಯ ಸೇನೆಗೆ ಸೇರ್ಪಡೆಯಾಗಿ ಲೆಫ್ಟಿನೆಂಟ್ ಶ್ರೇಣಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಪುಲ್ವಾಮದಲ್ಲಿ ಉಗ್ರರಿಂದ ಕಾರು ಅಪಹರಣ :

ಈ ಮಧ್ಯೆ, ದಕ್ಷಿಣ ಕಾಶ್ಮೀರದ ಸಮ್‍ಬೂರಾದಲ್ಲಿ ವ್ಯಕ್ತಿಯೊಬ್ಬನ ಹೊಸ ಕಾರೊಂದನ್ನು ಶಸ್ತ್ರಸಜ್ಜಿತ ಉಗ್ರರು ಅಪಹರಿಸಿರುವ ಘಟನೆ ನಡೆಸಿದ್ದು, ಆತಂಕ ಸೃಷ್ಟಿಸಿದೆ.  ಉಗ್ರರ ಈ ಕೃತ್ಯದ ನಂತರ ನಡೆಯಬಹುದಾದ ಸಂಭವನೀಯ ದಾಳಿಯನ್ನು ವಿಫಲಗೊಳಿಸಲು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಾಗಿದೆ. ಹೆದ್ದಾರಿಗಳಲ್ಲಿ ತೀವ್ರ ಶೋಧ ಮುಂದವರಿದಿದೆ.
ಇದೇ ವೇಳೆ, ಬದ್ಗಾಂ ಜಿಲ್ಲೆಯ ಚಾದೂರಾ ತಹಸೀಲ್‍ನ ಕ್ರಾಲ್‍ಚೆಕ್ ಗ್ರಾಮದಲ್ಲಿ 20 ರಿಂದ 40 ಬಾರಿ ರೈಫಲ್‍ಗಳಿಂದ ಗುಂಡು ಹಾರಿಸಿದ್ದ ಶಬ್ಧ ಕೇಳಿಬಂದಿದ್ದು, ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕಾಶ್ಮೀರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಭದ್ರತೆಯನ್ನು ಬಿಗಿಗೊಳಿಸಲಾಗಿದೆ.   ಇನ್ನೊಂದು ಘಟನೆಯಲ್ಲಿ ಶೋಪಿಯಾನ್ ಜಿಲ್ಲೆಯ ಕುಮ್‍ದಲನ್ ಗ್ರಾಮದ ಬಳಿ ಶಸ್ತ್ರಸಜ್ಜಿತ ಉಗ್ರರು ಪೊಲೀಸ್ ಅಧಿಕಾರಿಗಳಿದ್ದ ವಾಹನದ ಮೇಲೆ ದಾಳಿ ನಡೆಸಿದರು. ಪೊಲೀಸರು ಜಾಗ್ರತೆ ವಹಿಸಿದ್ದರಿಂದ ಸಂಭವಿಸಬಹುದಾದ ಭಯೋತ್ಪಾದಕರ ಕೃತ್ಯ ತಪ್ಪಿದೆ. ಉಗ್ರರು ಪರಾರಿಯಾಗಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin