ಹಸೆಮಣೆಯಿಂದ ಎಸ್ಕೇಪ್ ಆಗಿದ್ದ ವಧು ಪ್ರಿಯತಮನ ತೋಳಲ್ಲಿ ಸೇಫ್..!

Marriage--01

ಕುಣಿಗಲ್, ನ.12-ಮಾಂಗಲ್ಯಧಾರಣೆ ದಿನವೇ ವಧು ಪರಾರಿಯಾಗಿ ಪ್ರಿಯಕರನೊಂದಿಗೆ ಮದುವೆ ಮಾಡಿಕೊಂಡಿರುವ ಅಪರೂಪದ ಘಟನೆ ವರದಿಯಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾರೇಹಳ್ಳಿ ಗ್ರಾಮದ ರಾಮಕೃಷ್ಣ ಹಾಗೂ ಬೆಂಗಳೂರಿನ ಕಾಮಾಕ್ಷಿಪಾಳ್ಯದ ರಮ್ಯಾ ಎಂಬಾಕೆಯ ವಿವಾಹ ಇಂದು ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ನಡೆಯಬೇಕಿತ್ತು.  ಅದರಂತೆ ರಾತ್ರಿ ಎರಡೂ ಕುಟುಂಬದಲ್ಲಿ ಎಡೆಯೂರಿಗೆ ತೆರಳಿದ್ದಾರೆ. ಸಂಜೆ ನಡೆದ ಆರತಕ್ಷತೆಯಲ್ಲಿ ರಮ್ಯಾ ಖುಷಿಯಾಗಿಯೇ ಇದ್ದಳೆಂದು ಹೇಳಲಾಗಿದೆ.

ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ರಮ್ಯಾ ಮೊದಲೇ ಅಂದುಕೊಂಡಂತೆ ಎಲ್ಲರೂ ಮಲಗಿದ್ದ ವೇಳೆ ಕಾರಿನಲ್ಲಿ ಬಂದಿದ್ದ ಪ್ರಿಯಕರನೊಂದಿಗೆ ಮದುವೆ ಮನೆಯಿಂದ ಪರಾರಿಯಾಗಿದ್ದಾಳೆ. ಬೆಳಗ್ಗೆ ವಧುವಿನ ಕಡೆಯವರು ಎದ್ದು ನೋಡಿದಾಗ ರಮ್ಯಾ ಇಲ್ಲದಿರುವುದು ಗಮನಿಸಿ ಗಾಬರಿಯಾಗಿ ಎಲ್ಲಾ ಕಡೆ ಹುಡುಕಾಡಿದರೂ ಸುಳಿವು ಸಿಕ್ಕಿಲ್ಲ. ಈ ನಡುವೆ ಬೆಳಗ್ಗೆ 9.30ರಲ್ಲಿ ರಮ್ಯಾ ಪೋಷಕರಿಗೆ ಕರೆ ಮಾಡಿ ಇಷ್ಟಪಟ್ಟಿರುವ ಹುಡುಗನೊಂದಿಗೆ ಬೆಂಗಳೂರಿನಲ್ಲಿ ಮದುವೆ ಮಾಡಿಕೊಂಡಿದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಿದ್ದಾಳೆ.

ಒಂದು ಕಡೆ ಪೋಷಕರಿಗೆ ಮರ್ಯಾದೆ ಪ್ರಶ್ನೆಯಾದರೆ, ಮತ್ತೊಂದೆಡೆ ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಂಡಿರುವುದು ಆತಂಕವನ್ನುಂಟು ಮಾಡಿದೆ. ರಮ್ಯಾ ಮದುವೆಯಾಗಿರುವ ವಿಷಯ ತಿಳಿದ ರಾಮಕೃಷ್ಣ, ಮದುವೆಗೆಂದು 5ಲಕ್ಷ ವೆಚ್ಚ ಮಾಡಲಾಗಿದೆ. ನನಗೆ ಆ ಯುವತಿ ಮೋಸಮಾಡಿದ್ದಾಳೆಂದು ಆಕೆಯ ವಿರುದ್ಧ ಎಡೆಯೂರು ಪೊಲೀಸರಿಗೆ ದೂರು ನೀಡಿದ್ದಾರೆ.

Sri Raghav

Admin