ಮನುಷ್ಯರನ್ನು ಅಧಃಪತನಕ್ಕೆ ತಳ್ಳುವ ಖಿನ್ನತೆಯೆಂಬ ಬ್ರಹ್ಮರಾಕ್ಷಸ

Depression--01

–  ಚಿಕ್ಕರಸು

ಆಧುನಿಕ ಜಗತ್ತಿನ ಅತಿ ವೇಗದ ಜೀವನಶೈಲಿ, ಅದರಿಂದ ಎದುರಾಗುವ ಒತ್ತಡಗಳು, ಬದುಕಿನ ಜಂಜಡಗಳು, ಕಷ್ಟ-ಕೋಟಲೆಗಳು ವ್ಯಕ್ತಿಯ (ಹೆಣ್ಣಿರಲಿ, ಗಂಡಿರಲಿ) ಆತ್ಮಸ್ಥೈರ್ಯವನ್ನು ಅಡಿಗಡಿಗೂ ಕುಗ್ಗಿಸುತ್ತಲೇ ಇರುತ್ತವೆ. ಹಣ ಮತ್ತು ಅಧಿಕಾರ ಕೇಂದ್ರಿತ ಜೀವನ ಗತಿಯಲ್ಲಿ ಮನುಷ್ಯರ ಮನೋಸ್ಥೈರ್ಯ ಕುಸಿಯುವುದು, ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಅಚ್ಚರಿಯೇನಲ್ಲ. ಇಂತಹ ಪರಿಸ್ಥಿತಿಗಳು ದುರ್ಬಲ ಮನಸ್ಸಿನವರ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.  ಇಂತಹ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಆತ್ಮಬಲವಿಲ್ಲದ, ಟೊಳ್ಳು ಮನಸ್ಸಿನ ವ್ಯಕ್ತಿಗಳು ತಮ್ಮ ಮೇಲೆ ಕವಿದ ಗೊಂದಲಗಳಿಂದ ಹೊರಬರಲಾಗದೆ ಇದ್ದಬದ್ದ ಆತ್ಮಶಕ್ತಿಯನ್ನೆಲ್ಲ ಕಳೆದುಕೊಂಡು ಖಿನ್ನತೆ ಎಂಬ ಮಹಾಮಾರಿಯ ದಾಳಿಗೆ ಗುರಿಯಾಗುತ್ತಾರೆ. ಈ ಖಿನ್ನತೆಯೇ ಅನೇಕ ವೇಳೆ ಅಂತಹ ವ್ಯಕ್ತಿಗಳಿಂದ ಮಾಡಬಾರದ ಕೃತ್ಯಗಳನ್ನೆಲ್ಲ ಮಾಡಿಸಿಬಿಡುತ್ತದೆ.

ಖಿನ್ನತೆಗೆ ಒಳಗಾಗುವವರಲ್ಲಿ ಮಹಿಳೆಯರೇ ಹೆಚ್ಚು. ಸಾಮಾನ್ಯವಾಗಿ ಬಹುತೇಕ ಮಹಿಳೆಯರನ್ನು ಆರ್ಥಿಕ ಅಭದ್ರತೆ, ಅಸಹಾಯಕತೆ ಕಾಡುತ್ತದೆ. ಪ್ರೀತಿಸಿದವನು ನಡುನೀರಲ್ಲಿ ಕೈಬಿಟ್ಟಾಗ, ಉದ್ಯೋಗ ವಂಚಿತರಾದಾಗ, ತಾನು ಸುಂದರಳಾಗಿಲ್ಲ, ಬುದ್ಧಿವಂತಳಲ್ಲ, ಸಮಾಜ ನನ್ನತ್ತ ಕೀಳಾಗಿ ನೋಡುತ್ತದೆ, ನಾನು ಇತರರಂತೆ ಸಂಪಾದನೆ ಮಾಡುತ್ತಿಲ್ಲ. ನನ್ನನ್ನು ಯಾರೂ ಪ್ರೀತಿಸುತ್ತಿಲ್ಲ, ಯಾರೂ ನನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲ, ನಾನು ಇನ್ನೊಬ್ಬರಂತೆ ಮೇಲೇರಲಾರೆ, ನಾನು ಹೆತ್ತವರಿಗೆ ಹೊರೆಯಾಗಿದ್ದೇನೆ… ಹೀಗೆ ಹತ್ತು ಹಲವು ಕಾರಣಗಳು ಖಿನ್ನತೆ ಮತ್ತು ಹತಾಶೆಗೆ ಮೂಲವಾಗುತ್ತವೆ.

ವಾಸಿಯಾಗದ ರೋಗವಲ್ಲ : 

ಖಿನ್ನತೆ ಚಕ್ರವ್ಯೂಹವಿದ್ದಂತೆ. ಆದರೂ ಇದರಿಂದ ಹೊರಬರಲು ಸಾಕಷ್ಟು ಮಾರ್ಗಗಳಿವೆ. ಆದರೆ ಆ ಮಾರ್ಗ ತಿಳಿಯದ ದುರ್ಬಲ ಮನಸ್ಸಿನ ವ್ಯಕ್ತಿಗಳು ಸ್ವತಃ ತಮ್ಮ ಜೀವನವನ್ನು ನರಕಮಯವಾಗಿಸಿ ಕೊಳ್ಳುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆ ಅಥವಾ ಇನ್ನೊಬ್ಬರ ಹತ್ಯೆಯಂತಹ ದುಸ್ಸಾಹಸಗಳಿಗೂ ಮುಂದಾಗಿಬಿಡುತ್ತಾರೆ.ಸುಂದರವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಖಿನ್ನತೆ ವಾಸಿಯಾಗದ ಅಥವಾ ಚಿಕಿತ್ಸೆ ಇಲ್ಲದ ಸಾಂಕ್ರಾಮಿಕ ರೋಗವೇನಲ್ಲ. ಅತ್ಯಂತ ಸರಳವಾಗಿಯೇ ಖಿನ್ನತೆಯನ್ನು ದೂರ ಮಾಡುವ ಮಾರ್ಗಗಳಿವೆ. ಆದರೆ ಬಹುತೇಕರಿಗೆ ಇದರ ಅರಿವಿಲ್ಲ ಅಷ್ಟೆ. 

ಒಂದು ಕೋಟಿ ಜೀವ ಬಲಿ:

ಜಗತ್ತಿನಾದ್ಯಂತ 30 ಕೋಟಿಗೂ ಹೆಚ್ಚು ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕಳೆದ ವರ್ಷ ಒಂದು ಕೋಟಿ ಮಂದಿ ಖಿನ್ನತೆಯಿಂದ ಹೊರಬರಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆಂಬ ಬಗ್ಗೆ ವಿಶ್ವಸಂಸ್ಥೆಯ ವರದಿ ದಿಗಿಲು ಹುಟ್ಟಿಸುವಂತಿದೆ.   ಇತ್ತೀಚೆಗೆ ಖಿನ್ನತೆಗೆ ಒಳಗಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಡಿಮೆ ತಲಾದಾಯವಿರುವ ದೇಶಗಳಲ್ಲೇ ಇದು ಅತಿಯಾಗಿ ಕಾಣಿಸಿಕೊಳ್ಳುತ್ತಿದೆ. ಮೊದಲನೆಯದಾಗಿ ಆರ್ಥಿಕ ಸಂಕಷ್ಟ, ಎರಡನೆಯದಾಗಿ ಪ್ರೇಮ ವೈಫಲ್ಯಗಳು ಎಂಬುದು ಸಮೀಕ್ಷೆಯಿಂದ ತಿಳಿದು ಬರುತ್ತದೆ. ಇಷ್ಟೇ ಅಲ್ಲದೆ ಮೇಲೆ ಹೇಳಿದ ಕಾರಣಗಳೂ ಇದಕ್ಕೆ ತಮ್ಮ ಕೊಡುಗೆ ನೀಡುತ್ತವೆ. ಮುಂದುವರಿದ ರಾಷ್ಟ್ರಗಳಲ್ಲೂ ರಾಜಕೀಯ ನೀತಿಗಳ ಏರುಪೇರುಗಳಿಂದಾಗಿ ಅನೇಕ ಯುವಜನತೆ ಉದ್ಯೋಗ ಕಳೆದುಕೊಳ್ಳುತ್ತಿದ್ದು, ತಮಗರಿವಿಲ್ಲದೆಯೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಾರೆ.

ಯಾವುದೇ ವ್ಯಕ್ತಿ ಜೀವನದಲ್ಲಿ ತಾನು ಸೋತೆ, ನನ್ನನ್ನು ಸಮಾಜ ನಿಕೃಷ್ಟವಾಗಿ ಕಾಣುತ್ತದೆ, ಈ ತುಮುಲದಿಂದ ನಾನಿನ್ನು ಹೊರಬರಲಾರೆ ಎಂಬಂತಹ ಹತಾಶೆ, ಖಿನ್ನತೆಗೆ ತಲುಪಿದಾಗ ಆ ವ್ಯಕ್ತಿ ಈ ಪ್ರಪಂಚದಿಂದಲೇ ದೂರಾಗುವ ಯೋಚನೆ ಕೂಡ ಮಾಡಬಹುದು. ಅಥವಾ ಇತರರಿಗೆ ಅಪಾಯ ಉಂಟು ಮಾಡಬಹದು. ಸಮಾಜಕ್ಕೆ ಹೊರೆಯಾಗಬಹದು.
ಈ ಖಿನ್ನತೆ ಮತ್ತು ಹತಾಶೆಗಳನ್ನ್ನು ಮೆಟ್ಟಿ ನಿಂತು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮೇಲೆದ್ದು ಬದುಕಿನಲ್ಲಿ ಔನ್ನತ್ಯವನ್ನು ಸಾಧಿಸಿ ತಾವೂ ಬದುಕಿ ಸಮಾಜಕ್ಕೂ ಮಾರ್ಗದರ್ಶಕರಾದ ಅನೇಕ ಮಹನೀಯರು ನಮ್ಮ ಕಣ್ಣೆದುರಿಗಿದ್ದಾರೆ.

ಅಂತಹ ಗಣ್ಯ ವ್ಯಕ್ತಿಗಳ ಬಗ್ಗೆ ತಿಳಿಯುವುದು ಎಲ್ಲರಿಗೂ ಸ್ಫೂರ್ತಿಯ ಸೆಲೆಯಾದೀತು. ಬದುಕಿಗೆ ದಾರಿದೀಪವಾದೀತು. ಹಾಗೆಂದೇ ಅಂತಹ ಸಾಧಕರನ್ನು ಪರಿಚಯಿಸುವುದು ನಮ್ಮ ಉದ್ದೇಶ. ಅದರಿಂದ ಎಲ್ಲರಲ್ಲಿ ಜೀವನೋತ್ಸಾಹ, ಸ್ಫೂರ್ತಿ ಉಕ್ಕಿದರೆ, ಭವಿಷ್ಯದ ಬದುಕಿಗೆ ಪ್ರೇರೇಪಣೆಯಾದರೆ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ. ಅಂತಹ ಸಾಧಕರ ಸಾಲಿನಲ್ಲಿ ಮೊದಲಿಗೆ ಬಾಲಿವುಡ್‍ನಲ್ಲಿ ಒಂದು ಕಾಲದ ಬ್ಯೂಟಿ ಕ್ವೀನ್ ಎಂದೇ ಹೆಸರಾದ ಆಶಾ ಪರೇಖ್ ಬಗ್ಗೆ ನೋಡೋಣ.

ಆಶಾ ಪರೇಖ್‍ಗೆ ಖಿನ್ನತೆ  : 

1960-80ರ ದಶಕಗಳಲ್ಲಿ ಆಶಾ ಪರೇಖ್ ಎಂಬ ಸೌಂದರ್ಯ ರಾಣಿ ಅಂದಿನ ಪಡ್ಡೆಗಳ ಹೃದಯ ಬಡಿತವನ್ನು ಹೆಚ್ಚಿಸಿದ್ದು, ಬೆಳ್ಳಿತೆರೆಯ ಮೇಲೆ ಅನಭಿಷಿಕ್ತ ಸಾಮ್ರಾಜ್ಞಿಯಾಗಿ ಮೆರೆದದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.  ಆಶಾ ಪರೇಖ್ ಕೇವಲ ತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರದರ್ಶನದ ಗೊಂಬೆ ಮಾತ್ರ ಆಗಿರಲಿಲ್ಲ. ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಹೆಸರು ಮಾಡಿದವರು. 1959ರಿಂದ 1973ರವರೆಗೆ ಹಿಂದಿ ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿ ಮಿಂಚಿದವರು. ಇವರು ನಟಿಸಿದ `ಕಟಿ ಪತಂಗ್’, `ಲವ್ ಇನ್ ಟೋಕಿಯೊ’, `ಆರಾಧನಾ’, `ಕಾಶ್ಮೀರ್ ಕೆ ಕಲಿ’ ಅಂತಹ ಮಹೋನ್ನತ ಚಿತ್ರಗಳು ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳ ಶ್ರೇಷ್ಠ ಅಭಿನೇತ್ರಿ ಆಶಾ ಪರೇಖ್. 1992ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಇವರನ್ನು ಅರಸಿಕೊಂಡು ಬಂದಿತ್ತು. ಇಷ್ಟೇ ಅಲ್ಲ ಇನ್ನೂ ಅನೇಕ ಪ್ರಶಸ್ತಿ, ಗೌರವಗಳು ಇವರ ಕಿರೀಟದ ಗರಿಯಾದವು.  1942ರ ಅಕ್ಟೋಬರ್ 2ರಂದು ಪ್ರಾಣ್‍ಲಾಲ್ ಪರೇಖ್ ಮತ್ತು ಸುಧಾ ದಂಪತಿಯ ಮಗಳಾಗಿ ಜನಿಸಿದ ಆಶಾ, ಚಿಕ್ಕ ವಯಸ್ಸಿನಲ್ಲೇ ಬಣ್ಣ ಹಚ್ಚಿ ಬಾಲಿವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸಿ ಮೆರೆದವರು.

ಖಿನ್ನತೆಯ ಬಲೆಯಲ್ಲಿ : 

ಇಂತಹ ಅದ್ವಿತೀಯ ಸುಂದರಿ, ಖ್ಯಾತಿವೆತ್ತ ಅಭಿನೇತ್ರಿ ಆಶಾ ಪರೇಖ್ ಕೂಡ ಒಮ್ಮೆ ಖಿನ್ನತೆ ಮತ್ತು ಹತಾಶೆಯ ಬಲೆಯಲ್ಲಿ ಸಿಲುಕಿದ್ದವರೇ. ಆಗಷ್ಟೇ ಚಿತ್ರರಂಗದಲ್ಲಿ ಪ್ರಬುದ್ಧ ಮಾನಕ್ಕೆ ಬರುತ್ತಿದ್ದ ಈ ನಟಿ ಖಿನ್ನತೆಯಿಂದಾಗಿ ಪಾತಾಳಕ್ಕೆ ಕುಸಿದು ಹೋಗಿದ್ದರು.   ಹತಾಶೆ, ಖಿನ್ನತೆಗಳು ಅವರನ್ನು ಇನ್ನಿಲ್ಲದಂತೆ ಜರ್ಝರಿತರನ್ನಾಗಿ ಮಾಡಿದ್ದವು. ಇನ್ನೇನು ಆಶಾ ಪರೇಖ್ ಮೇಲೇಳುವುದಿಲ್ಲ ಮತ್ತು ಅವರ ಸಿನಿಮಾ ಬದುಕು ಮುಗಿದಂತೆಯೇ ಎಂಬ ಹಂತ ತಲುಪಿದ್ದರು. ಆದರೆ ಕೆಲವೇ ಸಮಯದಲ್ಲಿ ಆಶಾ ಪರೇಖ್ ಅದರಿಂದ ಹೊರಬಂದು ಎಂದಿನಂತೆ ತಮ್ಮ ಕಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.   ಆ ಸಂದರ್ಭ ಅವರಿಗೆ ನೆರವಾದವರು, ಆತ್ಮೀಯ ಸ್ನೇಹಿತರು ಮತ್ತು ವೈದ್ಯರು. ಆಶಾ ಪರೇಖ್ ಇಂತಹ ಖಿನ್ನತೆಗೆ ಗುರಿಯಾಗಿದ್ದು ಏಕೆ ಮತ್ತು ಅದರ ಪರಿಣಾಮ ಏನು ಎಂಬ ಬಗ್ಗೆ ಅವರ ಬಾಯಲ್ಲೇ ಕೇಳಿ….“ನಾನು ಸಿನಿಮಾರಂಗದಲ್ಲಿ ವೇಗವಾಗಿ ಬೆಳೆಯುತ್ತಿದ್ದೆ. ಹೆಸರು, ಹಣ ಎರಡೂ ಬಂದಿದ್ದವು. ಆದರೆ ದುರದೃಷ್ಟವಶಾತ್ ಅದೇ ಸಮಯಕ್ಕೆ ನನ್ನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡೆ. ನನಗಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಭಾಸ…! ಏಕೆಂದರೆ, ನನಗೆ ಯಾವುದೇ ವ್ಯವಹಾರಿಕ ಪರಿಜ್ಞಾನವಿರಲಿಲ್ಲ. ಬದುಕು ನಿರ್ವಹಣೆ ಹೇಗೆ? ಮನೆ ನಡೆಸುವುದು ಹೇಗೆ? ಸಂಸಾರದ ಹೊಣೆ ಹೊರಲು ನನ್ನಿಂದ ಸಾಧ್ಯವೇ? ಸಿನಿಮಾದಲ್ಲೂ ನಟಿಸುತ್ತಾ, ಮನೆಯನ್ನೂ ತೂಗಿಸುವುದು ನನಗೆ ಸಾಧ್ಯವೇ ? ಈ ಎಲ್ಲ ಪ್ರಶ್ನೆಗಳಿಗೆ ನನ್ನ ಅಂತರಂಗದಲ್ಲಿ ಮೂಡಿದ ಉತ್ತರ ಒಂದೇ… ಇಲ್ಲ… ಸಾಧ್ಯವಿಲ್ಲ…. ನಾನಾಗ ಅಕ್ಷರಶಃ ಅನಾಥೆಯಾಗಿದ್ದೆ. ಇದೇ ನನ್ನನ್ನು ಖಿನ್ನತೆಯ ಕೂಪಕ್ಕೆ ತಳ್ಳಿದ್ದು”.

ಆಶಾ ಆಗ ಈ ಚಿತ್ರರಂಗದಿಂದಲೇ ದೂರಾಗುವ ಆಲೋಚನೆ ಮಾಡಿ ಬಿಟ್ಟಿದ್ದರು. ಇನ್ನು ನನ್ನಿಂದ ಈ ಕಲಾತಪಸ್ಸು ಅಸಾಧ್ಯ ಎನಿಸಿ ಬಿಟ್ಟಿತ್ತು. ಅವರಿಗೆ ಒಂದು ವೇಳೆ ಹಾಗೇ ಆಗಿಬಿಟ್ಟಿದ್ದರೆ….? ಇಲ್ಲ. ಹಾಗಾಗಲಿಲ್ಲ.  ಇಷ್ಟೆಲ್ಲಾ ಆದ ಮೇಲೆ ಅವರು ಕತ್ತಲೆಕೋಣೆ ಸೇರಿಬಿಟ್ಟರು. ಅದೊಂದು ದುಸ್ವಪ್ನವೇ ಆಗಿತ್ತು ಅವರ ಪಾಲಿಗೆ. ಆದರೆ ಅವರ ಕೆಲ ಸ್ನೇಹಿತರು , ಕುಟುಂಬ ವೈದ್ಯರು ಅವರಲ್ಲಿದ್ದ ಈ ಋಣಾತ್ಮಕ ಭಾವನೆಯನ್ಮು ದೂರ ಸರಿಸಿ ಧನಾತ್ಮಕವಾಗಿ ಸ್ಪಂದಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.  ಆಶಾ ಪರೇಖ್ ಅವರೂ ಕೂಡ ತಮ್ಮ ಆ ಭಯ, ಆತಂಕ, ನೆಗೆಟಿವ್ ಆಲೋಚನೆಗಳನ್ನು ದೂರ ಸರಿಸಿ ಪುಟಿದೆದ್ದು ನಿಂತರು. ಮತ್ತೆ ಯಥಾಸ್ಥಿತಿಗೆ ಬಂದರು.   ಮೊದಲು ಖಿನ್ನತೆಗೆ ಒಳಗಾದಾಗ ಇನ್ನು ಇದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಅವರು ನಂತರ ಖಿನ್ನತೆಯಿಂದ ಹೊರ ಬರುವುದು ಅಷ್ಟೇನೂ ಕಷ್ಟವಲ್ಲ ಎಂದು ವ್ಯಾಖ್ಯಾನಿಸುವಂತಾದರು. ಇನ್ನೊಬ್ಬರಿಗೆ ಮಾರ್ಗದರ್ಶನ ನೀಡುವಂತಾದರು.

ಅಷ್ಟೇ ಅಲ್ಲ ಸಾಲು ಸಾಲು ಹಿಟ್ ಚಿತ್ರ ನೀಡಿ ಬಾಲಿವುಡ್‍ನ ಅನಭಿಷಿಕ್ತ ಸಾಮ್ರಾಜ್ಞೆಯಾಗಿ ಮೆರೆದರು.  ಆಶಾ ಅವರು ಬರೆದಿರುವ “ಹಿಟ್ ಗರ್ಲ್” ಎಂಬ ಕೃತಿಯಲ್ಲಿ ಅವರು ಇದನ್ನೆಲ್ಲ ತೆರೆದಿಟ್ಟಿದ್ದಾರೆ. ಅವರ ಪುಸ್ತಕದಲ್ಲಿ ಒಂದು ಕಡೆ ಹೀಗೆ ಹೇಳಿದ್ದಾರೆ…. “ನೋ… ಇಟ್ ವಾಸ್ ನಾಟ್ ಟಫ್. ಇನ್‍ಫ್ಯಾಕ್ಟ್ ಐ ವಾಂಟೆಂಡ್ ಟು ಬಿ ಓಪನ್ ಎಬೌಟ್ ಇಟ್ ಅಂಡ್ ಐ ವಾಂಟೆಂಡ್ ಟು ಗೆಟ್ ಕ್ಯೂರ್ಡ್. ಐ ಡಿಡ್ ನಾಟ್ ವಾಂಟ್ ಟು ಗೋ ಮೋರ್ ಡೀಪ್ ಇನ್ ಟು ಇಟ್. ಟುಡೇಸ್ ಚಿಲ್ಡ್ರನ್ ಆರ್ ಇನ್ ಟು ಎ ಡಿಪ್ರೆಷನ್ ಅಂಡ್ ದೆ ಡೋಂಟ್ ಟಾಕ್ ಎಬೌಟ್ ಇಟ್. ದೆ ಡೋಂಟ್ ಗೋ ಟು ದಿ ಡಾಕ್ಟರ್ ಅಂಡ್ ದಿಸ್ ಈಸ್ ನಾಟ್ ಎ ಗುಡ್ ಥಿಂಗ್, ಬಿಕಾಸ್ ಯು ಲೂಸ್ ಎ ಲೈಫ್. ಡಿಪ್ರೆಷನ್ ಕೆನ್ ಟೇಕ್ ಯು ಇನ್ ಟು ಎ ಬ್ಲಾಕ್ ಹೋಲ್. ಸೋ ಇಟ್ ಈಸ್ ಟೆರಿಬಲ್.” ಆಶಾರ ಈ ಹೇಳಿಕೆಯಲ್ಲಿ ಅವರ ಛಲ, ಮನೋಸ್ಥೈರ್ಯಗಳು ಎದ್ದು ಕಾಣುತ್ತವೆ. ವಿಶೇಷವೆಂದರೆ, ಆಶಾ ಅವರ `ಹಿಟ್ ಗರ್ಲ್’ ಕೃತಿ ಇತ್ತೀಚೆಗಷ್ಟೇ ಮುಂಬೈನಲ್ಲಿ ಬಿಡುಗಡೆಯಾಗಿದೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪುಸ್ತಕ ಬಿಡುಗಡೆ ಮಾಡಿದರು. ಸಿಕ್ಕಿದರೆ ಆ ಪುಸ್ತಕ ಓದಿ. (ಖಿನ್ನತೆಯಿಂದ ಹೊರ ಬರುವುದು ಹೇಗೆ? ಅದಕ್ಕೆ ಏನು ಮಾಡಬೇಕು ಎಂಬುದು ಎಲ್ಲರ ಪ್ರಶ್ನೆ. ಈ ಕುರಿತಂತೆ ಮುಂದಿನ ಸಂಚಿಕೆಯಲ್ಲಿ ಕೆಲವು ಟಿಪ್ಸ್ ಇದೇ ಅಂಕಣದಲ್ಲಿ ನಮ್ಮ ಓದುಗರಿಗಾಗಿ )

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin