ಮರಾಠಾ ಮೌನ ಕ್ರಾಂತಿ ಮೋರ್ಚಾಕ್ಕೆ ಶರತ್ತು ಬದ್ಧ : ಅನುಮತಿ ನೀಡಲು ಆಗ್ರಹಿಸಿ ಮನವಿ

17
ಗೋಕಾಕ,ಫೆ.14- ನಾಡದ್ರೋಹಿ ಎಂಇಎಸ್ ಸಂಘಟನೆ ನಡೆಸಲು ಉದ್ದೇಶಿಸಿರುವ ಮರಾಠಾ ಮೌನ ಕ್ರಾಂತಿ ಮೋರ್ಚಾಕ್ಕೆ ಶರತ್ತು ಬದ್ಧ ಅನುಮತಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತ್ರತ್ವದಲ್ಲಿ ನಿನ್ನೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಬಸವೇಶ್ವರ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಎಂಇಎಸ್ ಸಂಘಟನೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ 16ರಂದು ಮರಾಠಾ ಸಮಾಜ ದವರು ಮೀಸಲಾತಿಗಾಗಿ ಮರಾಠಾ ಮೌನ ಕ್ರಾಂತಿ ಮೋರ್ಚಾ ಹೆಸರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡು ಸರಕಾರವನ್ನು ಆಗ್ರಹಿಸುತ್ತಿರುವುದು ಸ್ವಾಗತಾರ್ಹ. ಆದರೆ ನಾಡ ವಿರೋಧಿ ಎಂಇಎಸ್ ಸಂಘಟನೆ ವಿನಾಕಾರಣ ಜಿಲ್ಲೆಯಲ್ಲಿ ಶಾಂತಿ ಕದಡುವ ದುಸ್ಸಾಹಸ ಮಾಡಿ ಪದೇ ಪದೇ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಅವಮಾನಿಸಿ ನಾಡ ವಿರೋಧಿ ಧೋರಣೆ ಅನುಸರಿಸುತ್ತಿರುವುದು ಖಂಡನಾರ್ಹವಾಗಿದೆ.

ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಇದೇ 16ರಂದು ಎಂಇಎಸ್ ಮರಾಠಾ ಮೌನ ಕ್ರಾಂತಿ ಮೋರ್ಚಾ ಹೆಸರಿನಲ್ಲಿ ನಡೆಸಲು ಉದ್ದೇಶಿಸಿರುವ ಹೋರಾಟಕ್ಕೆ ಜಿಲ್ಲಾಡಳಿತ ಕರ್ನಾಟಕದ ಹಾಗೂ ಬೆಳಗಾವಿ ಹಾಗೂ ಕನ್ನಡಿಗರ ವಿರೋಧಿ ಘೋಷಣೆಗಳನ್ನು ಕೂಗದಂತೆ ಹಾಗೂ ಗಡಿಭಾಗದ ವಿಷಯಗಳನ್ನು ಪ್ರಸ್ತಾಪಿಸಿದಂತೆ, ಗಡಿ ಭಾಗದ ನಿರ್ಣಯಗಳನ್ನು ತೆಗೆದುಕೊಳ್ಳದಂತೆ ಶರತ್ತು ಬದ್ಧ ಅನುಮತಿ ನೀಡಬೇಕು. ಮತ್ತು ಹೋರಾಟದ ಹೆಸರಿನಲ್ಲಿ ಯಾರಾದರೂ ನಾಡ ವಿರೋಧಿ ಘೋಷಣೆಗಳನ್ನು ಕೂಗಿದರೆ ಅಂತಹವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕರವೇ ಸಮಸ್ತ ಕನ್ನಡಿಗರ ಪರವಾಗಿ ಮನವಿ ಆಗ್ರಹಿಸಲಾಗಿದೆ.ಈ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ಉಪಾಧ್ಯಕ್ಷ ದೀಪಕ ಹಂಜಿ, ಅರಭಾವಿ ಬ್ಲಾಕ್ ಅಧ್ಯಕ್ಷ ನಿಜಾಮ ನದಾಫ, ಉಪಾಧ್ಯಕ್ಷ ಮಹಾದೇವ ಮಕ್ಕಳಗೇರಿ, ಸಂಚಾಲಕರಾದ ರೆಹಮಾನ ಮೊಕಾಶಿ, ಹನೀಪ ಸನದಿ, ಕೃಷ್ಣಾ ಖಾನಪ್ಪನವರ ಸೇರಿದಂತೆ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin