ಮಳೆಯಿಂದ ಬಿರುಕುಬಿಟ್ಟ ಅಪಾರ್ಟ್‍ಮೆಂಟ್, ನಿವಾಸಿಗಳ ತೆರವು, ಪರ್ಯಾಯ ವ್ಯವಸ್ಥೆ

Apartment--0

ಬೆಂಗಳೂರು, ಮೇ 29-ಮಳೆಯಿಂದ ಬಿರುಕು ಬಿಟ್ಟಿರುವ ಬೆಳ್ಳಂದೂರು ಸಮೀಪದ ಕಾಡುಬೀಸನಹಳ್ಳಿಯ ಯುಟಿಯೋಪಿಯಾ ಅಪಾರ್ಟ್‍ಮೆಂಟ್‍ನ 70 ನಿವಾಸಿಗಳನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಡುಬೀಸನಹಳ್ಳಿ ಸಮೀಪ ಸಲಾರ್‍ಪುರಿಯಾ ತತ್ವ ಸಂಸ್ಥೆಯವರು ಬೃಹತ್ ಕಟ್ಟಡ ನಿರ್ಮಾಣ ಮಾಡಲು ಪಾಯ ಅಗೆಯುತ್ತಿದ್ದರು.  ನಿನ್ನೆ ಬಿದ್ದ ಭಾರೀ ಮಳೆಗೆ ಪಾಯದ ಮಣ್ಣು ಕುಸಿದು ಅಕ್ಕಪಕ್ಕದ ನೆಲ ಸಡಿಲಗೊಂಡಿದ್ದ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಇರುವ ಯುಟಿಯೋಪಿಯಾ ಅಪಾರ್ಟ್‍ಮೆಂಟ್‍ನಲ್ಲಿ ಬಿರುಕು ಕಾಣಿಸಿಕೊಂಡಿತ್ತು.ಘಟನಾ ಸ್ಥಳಕ್ಕೆ ಇಂದು ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಜಿ.ಪದ್ಮಾವತಿ ಅವರು, ಕೂಡಲೇ ಅಪಾರ್ಟ್‍ಮೆಂಟ್‍ನ 70 ನಿವಾಸಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. 120 ನಿವಾಸಿಗಳಿರುವ ಅಪಾರ್ಟ್‍ಮೆಂಟ್‍ನಲ್ಲಿ 70 ನಿವಾಸಿಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

Apartment--v01

ಸ್ಥಳಕ್ಕೆ ಕಟ್ಟಡ ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ವರದಿ ಕೈ ಸೇರಿದ ನಂತರ ಯುಟಿಯೋಪಿಯಾ ಕಟ್ಟಡ ವಾಸಕ್ಕೆ ಯೋಗ್ಯವಿದೆಯೇ, ಇಲ್ಲವೇ ಎಂಬುದನ್ನು ತೀರ್ಮಾನಿಸಿ ಅಲ್ಲಿ ಜನರು ವಾಸ ಮಾಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಮೇಯರ್ ತಿಳಿಸಿದರು. ಬೃಹತ್ ಕಟ್ಟಡ ನಿರ್ಮಿಸುತ್ತಿರುವ ಸಲಾರ್‍ಪುರಿಯಾ ಸಂಸ್ಥೆಯವರಿಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಮೇಯರ್ ಸೂಚನೆ ನೀಡಿ ಯಾವುದೇ ಅನಾಹುತಕ್ಕೆ ಅವಕಾಶ ಮಾಡಿಕೊಟ್ಟರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.  ಸುಧಾಮನಗರ ವಾರ್ಡ್‍ನ ಪೂರ್ಣಿಮಾ ಚಿತ್ರಮಂದಿರ ಸಮೀಪ ನಿನ್ನೆ ರಾತ್ರಿ ಕುಸಿದು ಬಿದ್ದ ಕಟ್ಟಡಗಳನ್ನು ಪರಿಶೀಲನೆ ನಡೆಸಿದ ಮೇಯರ್ ಅವರು ಅಗತ್ಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin