ಮಸೀದಿ ನವೀಕರಣಕ್ಕೆ 1ಕೋಟಿ ಅನುದಾನ : ಪುಟ್ಟಣ್ಣಯ್ಯ ವಾಗ್ದಾನ

puttannayya
ಪಾಂಡವಪುರ, ಏ.9- ಪಟ್ಟಣದ 200 ವರ್ಷಗಳಷ್ಟು ಹಳೆಯದಾದ ದೊಡ್ಡ ಮಸೀದಿ ನವೀಕರಣಕ್ಕೆ ಒಂದು ಕೋಟಿ ರೂ. ಅನುದಾನ ಕೊಡಿಸುವುದಾಗಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಾಗ್ದಾನ ಮಾಡಿದ್ದಾರೆ.ಪಟ್ಟಣದ ಹಜರತ್ ಸೈಯದ್ ಮುಸ್ತಖೀಂ ಷಾ ವಲಿ ದರ್ಗಾ ಸಮಿತಿ ಹಾಗೂ ಮಸ್ಜಿದೇ ಆಲಾ ಅಹಲೇ ಸುನ್ನತುಲ್ ಜಮಾತ್ ವತಿಯಿಂದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ದಂಪತಿಗಳಿಗೆ ಬಸವನಗುಡಿ ಬೀದಿಯಲ್ಲಿನ ದರ್ಗಾ ಮೊಹಲ್ಲಾದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸನ್ಮಾನ ಮತ್ತು ಅಭಿನಂದನೆಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ, ಪಟ್ಟಣದ ದೊಡ್ಡಮಸೀದಿಗೆ ಚಾರಿತ್ರಿಕೆ ಹಿನ್ನಲೆ ಇದೆ. ಸುಮಾರು 200 ವರ್ಷಗಳಷ್ಟು ಹಳೆಯದಾದ ಮಸೀದಿ ನವೀಕರಣಕ್ಕೆ ಸೂಕ್ತ ಅನುದಾನ ನೀಡುತ್ತೇನೆ ಎಂದರು.
ಜೊತೆಗೆ ತಾಲ್ಲೂಕಿನ ಎಲ್ಲಾ ಮಸೀದಿಗಳು ದರ್ಗಾಗಳು ಮತ್ತು ಮುಸ್ಲಿಂ ಸ್ಮಾಶನಗಳ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇನೆ ಎಂದು ತಿಳಿಸಿದರು.

ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಮುಸ್ಲಿಂ ಸಮುದಾಯದ ಮುಖಂಡರು ಅತ್ಯಂತ ಪ್ರೀತಿಯಿಂದ ನಮ್ಮನ್ನು ಕುದುರೆ ಸಾರೂಟಿನಲ್ಲಿ ಮೆರವಣಿಗೆ ಮಾಡಿ ಅಭಿನಂದಿಸಿ ತಮ್ಮ ಪ್ರಾಮಾಣಿಕ ಪ್ರೀತಿ ತೋರಿದ್ದಾರೆ, ಇದಕ್ಕೆ ತಾವು ಚಿರಋಣಿಯಾಗಿದ್ದು, ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಡೊಡ್ಡ ಮಸೀದಿ ಆಡಳಿತ ಮಂಡಳಿ ನಿರ್ದೇಶಕ ನಜೀರ್ ಅಹಮದ್ ಮಾತನಾಡಿ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಮ್ಮ ರೈತಪರ ಹೋರಾಟಗಳ ನಡುವೆಯೂ ಕ್ಷೇತ್ರದಲ್ಲಿ ಹೆಚ್ಚು ಜವಾಬ್ದಾರಿಯಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ತಾಲ್ಲೂಕಿನಲ್ಲಿ ಮುಸ್ಲಿಂ ಸಮುದಾಯದ ಯುವಕರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು ಅವರ ಅಭಿವೃದ್ಧಿಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಕೋರಿದರು.

ಮಸೀದಿ ಗುರುಗಳಾದ ಹಜರತ್ ಸಲ್ಮಾನ್ ರಜಾ, ರೈತ ಸಂಘದ ಮುಖಂಡ ಎಲೆಕೆರೆ ಸಮಿಯುಲ್ಲಾ, ಮಸ್ಜೀದೆ ಆಲಾ ಅಹಲೇ ಸುನ್ನತುಲ್ ಜಮಾತ್ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್ (ಪಾಪು), ಕಾರ್ಯದರ್ಶಿ ಗೌಸ್ ಪಾಷ, ಹಜರತ್ ಸೈಯದ್ ಮುಸ್ತಖೀಂ ಷಾ ವಲಿ ದರ್ಗಾ ಸಮಿತಿ ಅಧ್ಯಕ್ಷ ಬಶೀರ್, ಕಾರ್ಯದರ್ಶಿ ಸೈಯದ್ ಹಮೀದ್ ಮುಮ್ತಾಜ್, ರಹಮಾನ್ ಸಾಬ್, ಫಾರೋಖ್, ವಸೀಂ, ಮುನವರ್ ಪಾಷ, ಮುಮ್ತಾಜ್, ಮುಜಾಹಿದ್ ಹಾಜಿ, ಫಯಾಸ್, ಕೋಯ್ತಾ ಬಾಬು ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin