ಮಸೂದ್ ಅಜರ್ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆ ಮೇಲೆ ಭಾರತ ಒತ್ತಡ
ನವದೆಹಲಿ,ಜ.6- ಭಯೋತ್ಪಾದನೆ ಚಟುವಟಿಕೆಗಳ ಮೂಲಕ ಕಂಠಕವಾಗಿ ಪರಿಣಮಿಸಿರುವ ಜೈಷ್-ಎ-ಮೊಹಮ್ಮದ್(ಜೆಇಎಂ) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿರುವ ಭಾರತ ವಿಶ್ವಸಂಸ್ಥೆ ಮೇಲೆ ಮತ್ತೊಮ್ಮೆ ಭಾರೀ ಒತ್ತಡ ಹೇರಿದೆ. ಜೆಇಎಂ ಮತ್ತು ಅಜರ್ನನ್ನು ಗ್ಲೋಬಲ್ ಟೆರರಿಸ್ಟ್ ಲಿಸ್ಟ್ಗೆ ಸೇರಿಸುವಂತೆ ವಿಶ್ವಸಂಸ್ಥೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ಮನವಿ ಸಲ್ಲಿಸಿದೆ.
ಜೆಇಎಂ ಮತ್ತು ಅಜರ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಆರಂಭದಿಂದಲೂ ಅಡ್ಡಗಾಲು ಹಾಕುತ್ತಿರುವ ಚೀನಾಕ್ಕೆ ತಿರುಗೇಟು ನೀಡಲು ಹೊಸ ರಾಜತಾಂತ್ರಿಕ ಕ್ರಮಗಳನ್ನು ಮೋದಿ ಅನುಸರಿಸುತ್ತಿದ್ದಾರೆ.
1993ರ ಮುಂಬೈ ಸರಣಿ ಸ್ಪೋಟದ ರೂವಾರಿ ದಾವೂದ್ ಇಬ್ರಾಹಿಂನ 15,000 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಲು ಯುಎಇ ದೇಶದ ಮೇಲೆ ರಾಜತಾಂತ್ರಿಕ ಕ್ರಮ ಅನುಸರಿಸಿ ಯಶಸ್ವಿಯಾಗಿರುವ ಮೋದಿ, ಈಗ ಜೈಷ್ ಮತ್ತು ಅಜರ್ನನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಣಿಯಲು ಮಾಸ್ಟರ್ ಸ್ಟ್ರೋಕ್ ತಂತ್ರ ಅನುಸರಿಸಿದ್ದಾರೆ. ಈ ವಿಷಯದಲ್ಲಿ ಚೀನಾ ಅನುಸರಿಸುತ್ತಿರುವ ಇಬ್ಬಗೆ ನೀತಿ ವಿರುದ್ಧ ಕೆಂಡಮಂಡಲವಾಗಿರುವ ಭಾರತ ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿ ಅಜರ್ ಹೆಸರನ್ನು ಶತಾಯಗತಾಯ ಸೇರಿಸಿ ಪಾಕಿಸ್ತಾನ ಮತ್ತು ಅದರ ಮಿತ್ರ ರಾಷ್ಟ್ರ ಚೀನಾಗೆ ಪ್ರತ್ಯುತ್ತರ ನೀಡಲು ಪ್ರಧಾನಿ ರಾಜತಾಂತ್ರಿಕತೆಯನ್ನು ಅನುಸರಿಸಿ ಅಂತಾರಾಷ್ಟ್ರೀಯ ಮಟ್ಟದ ಮೂಲಕ ಸಂಯುಕ್ತ ರಾಷ್ಟ್ರಗಳ ಮೇಲೆ (ಯುಎನ್) ಒತ್ತಡ ಹೇರಿ ಸಫಲರಾಗಲು ಕಾರ್ಯೋನ್ಮುಖರಾಗಿದ್ದಾರೆ.