ಮಹದಾಯಿಗಾಗಿ ಜ.27ರಂದು ಕರ್ನಾಟಕ ಬಂದ್ಗೆ ವ್ಯಾಪಕ ಬೆಂಬಲ
ಬೆಂಗಳೂರು, ಜ.11- ಮಹದಾಯಿಗಾಗಿ ಆಗ್ರಹಿಸಿ ಕನ್ನಡ ಒಕ್ಕೂಟ ಕರೆಕೊಟ್ಟಿರುವ ಜ.27ರ ಕರ್ನಾಟಕ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳು, ರೈತಪರ ಸಂಘಟನೆಗಳು, ಸ್ವಯಂಸೇವಾ ಸಂಘಗಳು ಸೇರಿದಂತೆ ಕನ್ನಡ ಒಕ್ಕೂಟವನ್ನು ಬೆಂಬಲಿಸಿ ಕರ್ನಾಟಕ ಬಂದ್ಗೆ ಮುಂದಾಗಿವೆ. ಈ ಸಂಬಂಧ ಈ ಸಂಜೆಯೊಂದಿಗೆ ಮಾತನಾಡಿದ ಒಕ್ಕೂಟದ ಮುಖಂಡರಾದ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆದ ಸಾ.ರಾ.ಗೋವಿಂದು ಅವರು ನಾಡಿನ ಹಿತ ಕಾಯುವ ದೃಷ್ಟಿಯಿಂದ ಉತ್ತರ ಕರ್ನಾಟಕ ಜನರ ದಾಹ ನೀಗಿಸುವ ಹಿನ್ನೆಲೆಯಲ್ಲಿ ಮಹದಾಯಿಗಾಗಿ ಕನ್ನಡ ಒಕ್ಕೂಟ ಹೋರಾಟ ನಡೆಸುತ್ತಿದೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಸುಮಾರು 2 ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಈಗಾಗಲೇ ಮಹದಾಯಿಗಾಗಿ ಆಗ್ರಹಿಸಿ ಕರ್ನಾಟಕ ಬಂದ್ ನಡೆಸಿದ್ದು, ಅಭೂತಪೂರ್ವ ಬೆಂಬಲ ದೊರಕಿತ್ತು. ಈಗ ಮಹದಾಯಿ ವಿವಾದದಲ್ಲಿ ತಾರ್ಕಿಕ ಅಂತ್ಯ ಕಾಣಬೇಕೆಂದು ಹೋರಾಟ ಹಮ್ಮಿಕೊಂಡಿದ್ದು, ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕರ್ನಾಟಕ ಬಂದ್ ಹಮ್ಮಿಕೊಳ್ಳಲಾಗಿದೆ. ರಾಜಕೀಯೇತರ ಹೋರಾಟಕ್ಕೆ ಎಲ್ಲ ಕನ್ನಡಪರ ಸಂಘಟನೆಗಳು ಕೈ ಜೋಡಿಸಲಿವೆ. ಚಿತ್ರರಂಗ ಕೂಡ ಈ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.