ಮಹದಾಯಿ ವಿವಾದ ಇತ್ಯರ್ಥಕ್ಕೆ ‘ಮಹಾ’ ಸಿಎಂ ಒಪ್ಪಿಗೆ..! ಪರಿಕ್ಕರ್‍ಗೆ ಸಿದ್ದರಾಮಯ್ಯ ಪತ್ರ

Spread the love

CM-Siddaramaiah--021

ಬೆಂಗಳೂರು, ಜು.12- ಉತ್ತರ ಕರ್ನಾಟಕ ಭಾಗದ ಸುಮಾರು 10 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲೆ ಯೋಜನೆ ಕುರಿತು ಸಂಧಾನ ಮಾತುಕತೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ.  ಈ ಮೂಲಕ ಮಹದಾಯಿ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಕಳಸಾ ಬಂಡೂರಿ ವಿವಾದ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಸಂಧಾನ ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಮೊದಲು ಎರಡು ಬಾರಿ ಸಭೆ ನಿಗದಿಯಾಗಿ ಮುಂದೂಡಿಕೆಯಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಸಂಧಾನ ಮಾತುಕತೆಗೆ ಸಹಕರಿಸುವಂತೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಸಿದ್ದರಾಮಯ್ಯ ಅವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಮಹದಾಯಿ ವಿವಾದವನ್ನು ಗೋವಾ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ಒಟ್ಟಿಗೆ ಕುಳಿತು ಬಗೆಹರಿಸಿಕೊಳ್ಳಬೇಕೆಂಬ ಅಭಿಪ್ರಾಯಕ್ಕೆ ನಮ್ಮ ಸಹಮತವಿದೆ. ಮೂರು ರಾಜ್ಯದ ಮುಖ್ಯಸ್ಥರು ಒಂದೇ ವೇದಿಕೆಯಲ್ಲಿ ಕುಳಿತು ಪರಸ್ಪರ ಸೌಹಾರ್ದತೆಯಿಂದ ಮಾತುಕತೆ ನಡೆಸಿದರೆ ವಿವಾದ ಇತ್ಯರ್ಥವಾಗುವ ವಿಶ್ವಾಸವಿದೆ ಎಂದು ಫಡ್ನವೀಸ್ ಅಭಿಪ್ರಾಯಪಟ್ಟಿದ್ದಾರೆ.
ವಿವಾದ ಇತ್ಯರ್ಥಕ್ಕೆ ಅಗತ್ಯವಾದ ಎಲ್ಲಾ ಸಹಕಾರವನ್ನು ನೀಡಲು ತಾನು ಬದ್ಧರಿರುವುದಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದು, ಗೋವಾ ಸಿಎಂ ಜೊತೆ ಚರ್ಚಿಸಿ ಸಭೆಯ ದಿನಾಂಕವನ್ನು ನಿಗದಿ ಮಾಡುವಂತೆ ಸಲಹೆ ನೀಡಿದ್ದಾರೆ.

ಇದನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಸಭೆ ನಡೆಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.  ಸಂಧಾನ ಸಭೆಗೆ ಮಹಾರಾಷ್ಟ್ರ ಸಿಎಂ ಒಪ್ಪಿದ್ದಾರೆ. ನಿಮಗೆ ಅನುಕೂಲವಾದ ದಿನದಂದು ಸಭೆ ನಡೆಸಲು ಸಮಯ ನಿಗದಿ ಮಾಡಿದರೆ ಅದಕ್ಕೆ ನಮ್ಮ ಸಹಮತವಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಮೇ 30 ರಂದು ಈ ವಿಷಯವಾಗಿ ಸುದೀರ್ಘ ಪತ್ರ ಬರೆದಿದ್ದನ್ನು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‍ಗೆ ನೆನಪಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin