ಮಹದಾಯಿ ವಿವಾದ : ನೀರಿನ ವಿಷಯದಲ್ಲಿ ರಾಜಕೀಯ ಬೇಡ, ಗೋವಾಗೆ ರಾಜ್ಯ ತಿರುಗೇಟು

Spread the love

CM-Siddaramaiah--021

ಬೆಂಗಳೂರು,ಜು.19- ಮಹದಾಯಿ ಕುಡಿಯುವ ನೀರು ಯೋಜನೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಗೋವಾ ಸರ್ಕಾರದ ಹೇಳಿಕೆಗೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅನೇಕ ನೀರಿನ ಯೋಜನೆಗಳನ್ನು ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಪರಿಹರಿಸಿಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಆದರೆ ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಸಮಸ್ಯೆ ಇತ್ಯರ್ಥಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ಅಸಮಾಧಾನ ಉಂಟುಮಾಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಗಾಂಧಿಭವನದಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದ ಈ ನಡವಳಿಕೆ ತುಂಬಾ ನೋವು ತಂದಿದೆ. ಕುಡಿಯುವ ನೀರು ಯೋಜನೆಯನ್ನು ನ್ಯಾಯಾಲಯದ ಆದೇಶ ಬರುವವರೆಗೂ ಕಾಯುವುದು ಎಷ್ಟರಮಟ್ಟಿಗೆ ಸರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದಿರುವ ಪತ್ರಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.   ಅದರಲ್ಲೂ ಗೋವಾದ ನೀರಾವರಿ ಸಚಿವರಾದ ಪಾಳೆಕರ್ ಅಲ್ಲಿನ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್‍ಗೆ ಪತ್ರ ಬರೆದು ಕರ್ನಾಟಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಹೇಳಿರುವುದು ಅಕ್ಷಮ್ಯ ಅಪರಾಧ. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಬರೆದಿರುವ ಪತ್ರವನ್ನು ಮೊದಲು ಸರಿಯಾಗಿ ಓದಲಿ ಎಂದು ತಿರುಗೇಟು ನೀಡಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಉತ್ತರ ಕರ್ನಾಟಕ ಜಿಲ್ಲೆಯ ಅನೇಕ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದಕ್ಕಾಗಿ ಮಾತುಕತೆ ನಡೆಸಲು ದಿನಾಂಕ ನಿಗದಿಪಡಿಸಿ ಎಂದು ಪತ್ರ ಬರೆಯುವುದು ತಪ್ಪೇ ಎಂದು ಪ್ರಶ್ನಿಸಿದರು.   ಜನತಂತ್ರ ವ್ಯವಸ್ಥೆಯಲ್ಲಿ ಸಂವಿಧಾನ ಬದ್ದವಾಗಿ ಸಚಿವರಾಗಿರುವ ಬಾಯಲ್ಲಿ ದರ್ಟಿ ಎಂಬ ಮಾತು ಬರಬಾರದು. ಸಚಿವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಈ ಪದ ನಮ್ಮ ರಾಜ್ಯಕ್ಕೆ ಅನ್ವಯವಾಗುವುದಿಲ್ಲ. ಏನಿದ್ದರೂ ಅದು ಗೋವಾಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಮಧ್ಯಪ್ರವೇಶಿಸಿ ಮೂರು ರಾಜ್ಯಗಳ ನಡುವೆ ಉಂಟಾಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.  ಅವರದೇ ಪಕ್ಷ ಆಡಳಿತವಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ಅಲ್ಲದೆ ನಮ್ಮ ಈ ಮುಖ್ಯಮಂತ್ರಿಗಳ ಕ್ರಮವನ್ನು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಗೋವಾ ಮಾತ್ರ ಪದೇ ಪದೇ ಕ್ಯಾತೆ ತೆಗೆದು ಯೋಜನೆಗೆ ಅಡ್ಡಿಪಡಿಸುವುದೇ ಅವರ ಮುಖ್ಯ ಗುರಿಯಾಗಿದೆ ಎಂದರು.

ಸರ್ಕಾರದಿಂದ ಕೆರೆಗಳನ್ನು ಡಿನೋಟಿಫೈ ಮಾಡುವ ಸಂಬಂಧ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.

ಏನಿದು ವಿವಾದ:

ಗೋವಾ ಸರ್ಕಾರದ ಜಲಸಂಪನ್ಮೂಲ ಸಚಿವ ವಿನೋದ್ ಪಾಳೇಕರ್ ಜುಲೈ 13ರಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕಚೇರಿಗೆ ಟಿಪ್ಪಣಿ ಸಲ್ಲಿಸಿದ್ದು, ಟಿಪ್ಪಣಿಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದ್ದರು.  ಈ ಟಿಪ್ಪಣಿಯಲ್ಲಿ ಕರ್ನಾಟಕ ಸರ್ಕಾರ ಕೀಳುಮಟ್ಟದ ತಂತ್ರಗಾರಿಕೆ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ. ಮಾತುಕತೆಯ ಮಾತೇ ಇಲ್ಲ, ನ್ಯಾಯಾಲಯದಲ್ಲೇ ಮಹದಾಯಿ ವಿವಾದ ಇತ್ಯರ್ಥವಾಗಲಿ ಹಾಗೂ ಗೋವಾದ ಹಿತರಕ್ಷಣೆಗೆ ತಾವು ಬದ್ಧ ಎಂದೂ ಟಿಪ್ಪಣಿಯಲ್ಲಿ ತಮ್ಮದೇ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದರು.

ಕಳೆದ ವಾರವಷ್ಟೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದು ಶೀಘ್ರವೇ ತ್ರಿವಳಿ ರಾಜ್ಯಗಳ ನಡುವೆ ಸಂಧಾನ ಸಭೆ ನಡೆಸಲು ದಿನಾಂಕ ಮತ್ತು ಸಮಯ ನಿಗದಿ ಮಾಡುವಂತೆ ಕೋರಿದ್ದರು.   ಕಳೆದ ಮೇ ಅಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಹದಾಯಿ ನ್ಯಾಯಮಂಡಳಿ ಮತ್ತು ಸುಪ್ರಿಂ ಕೋರ್ಟ್ ಸಲಹೆ ಅನುಸಾರ ತ್ರಿವಳಿ ರಾಜ್ಯಗಳ ಸಿಎಂಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಸರ್ಕಾರ ಉತ್ಸುಕವಾಗಿದೆ. ಹೀಗಾಗಿ ತಮ್ಮ ದಿನಾಂಕ ಮತ್ತು ಸಮಯಾವಕಾಶ ನೀಡಬೇಕು ಎಂದು ಕೋರಿ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಮತ್ತು ಗೋವಾ ಸಿಎಂ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಫಡ್ನವೀಸ್ ಎರಡು ವಾರಗಳ ಹಿಂದಷ್ಟೇ ಒಪ್ಪಿಗೆ ಸೂಚಿಸಿ, ಸಿದ್ದರಾಮಯ್ಯ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಪತ್ರವನ್ನೂ ಬರೆದಿದ್ದರು. ಆದರೆ ಗೋವಾ ಸಿಎಂ ಪರಿಕ್ಕರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಎರಡನೇ ಬಾರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಆ ಪತ್ರ ಬರೆದ ಬೆನ್ನಲ್ಲೇ ಪ್ರತಿಕ್ರಿಯೆ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಪಾಳೇಕರ್ ಹೇಳಿಕೆಯಿಂದ ಆಘಾತ ಉಂಟಾಗಿದೆ. ಸಚಿವ ಪಾಳೇಕರ್ ಬರೆದಿರುವ ಗೋವಾ ಸರ್ಕಾರದ ನೀರಾವರಿ ಇಲಾಖೆಯ ಟಿಪ್ಪಣಿಯಲ್ಲಿ ತಮ್ಮ ಸರ್ಕಾರ ಮಹದಾಯಿ ಹಿತ ಕಾಪಾಡಲು ಬದ್ಧವಾಗಿದ್ದು, ಮಾತುಕತೆಯ ಪ್ರಶ್ನೆಯೇ ಇಲ್ಲ. ಗೋವಾ ಸರ್ಕಾರದ ಪರವಾಗಿ ಆತ್ಮಾರಾಮ್ ನಾಡಕರ್ಣಿ ನೇತೃತ್ವದ ಕಾನೂನು ತಂಡ ಮಹದಾಯಿ ನ್ಯಾಯಮಂಡಳಿ ಎದುರು ಸಮರ್ಥವಾಗಿ ವಾದ ಮಂಡಿಸುತ್ತಿದೆ.

ಈಗಾಗಲೇ ನ್ಯಾಯಮಂಡಳಿ ಎದುರು ಕರ್ನಾಟಕದ ಕೀಳುಮಟ್ಟದ ತಂತ್ರಗಾರಿಕೆ ಬಯಲಾಗಿದೆ ಎಂದು ಖಾರವಾಗಿ ಹೇಳಿದ್ದಾರೆ. ಆದರೆ ಕರ್ನಾಟಕದ ಕೀಳುಮಟ್ಟದ ತಂತ್ರಗಾರಿಕೆ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin