ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆಂದು ಜನರಿಗೆ ಟೋಪಿ ಹಾಕಲು ಅಮಿತ್ ಷಾ ಹುನ್ನಾರ : ಹೆಚ್ಡಿಕೆ

HDK--01

ಹುಬ್ಬಳ್ಳಿ, ಮಾ.1-ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಹೇಳಿಕೆ ನೀಡಿರುವುದು ತಿಳುವಳಿಕೆ ಇಲ್ಲದವರು ಹೇಳಿದಂತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಟೋಪಿ ಹಾಕುವ ಸಲುವಾಗಿ ಅಮಿತ್ ಶಾ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಎರಡು ರಾಷ್ಟ್ರೀಯ ಪಕ್ಷಗಳು ಕಮಿಷನ್ ವಿಷಯ ಚರ್ಚಿಸುತ್ತಿವೆ. ರಾಜ್ಯದ ಅಭಿವೃದ್ಧಿ ವಿಷಯಗಳ ಕುರಿತು ಮಾತನಾಡುತ್ತಿಲ್ಲ. ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಕಮಿಷನ್ ಸರ್ಕಾರ, ನಮ್ಮದು ಮಿಷನ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಎರಡೂ ಪಕ್ಷದ ಬದಲು ಜನ ನಮ್ಮ ಕಡೆ ಕಣ್ಣು ತೆರೆದು ನೋಡಿದರೆ ನಾನು ಮಿಷನ್ ಸರ್ಕಾರ ಮಾಡಿ ತೋರಿಸುತ್ತೇನೆ. ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದರು.

ನಾನು ಹಳ್ಳಿಗಳಿಗೆ ಪೆÇಲೀಸರ ರಕ್ಷಣೆಯಲ್ಲಿ ಹೋಗುತ್ತಿಲ್ಲ. ಗ್ರಾಮೀಣ ಜನ ನನ್ನನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಸೀರೆ, ಬೆಳ್ಳಿ, ಹಣ ಕೊಟ್ಟು ಜನರನ್ನು ಕರೆತರುತ್ತಿಲ್ಲ. ರಾಷ್ಟ್ರೀಯ ಪಕ್ಷಗಳು ಆಮಿಷ ನೀಡಿ ಜನರನ್ನು ಕರೆದುಕೊಂಡು ಬರುತ್ತಿವೆ ಎಂದು ತಿಳಿಸಿದರು. ಯಡಿಯೂರಪ್ಪನವರು ನಿಜಕ್ಕೂ ರೈತ ಬಂಧುಗಳೇ ಎಂಬುದನ್ನು ಜನರೇ ತೀರ್ಮಾನ ಮಾಡಬೇಕು. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಮುಂದಾಗಲಿಲ್ಲ. ನಾನು ಒತ್ತಾಯ ಮಾಡಿದಾಗ ಕೇಂದ್ರ ಸರ್ಕಾರ ನೋಟು ಮುದ್ರಣ ಮಾಡುವ ಮಿಷನ್ ಕೊಟ್ಟಿಲ್ಲ ಎಂದಿದ್ದರು ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಚುನಾವಣೆ ಸಮೀಪವಾಗುತ್ತಿದ್ದಂತೆ ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ಉತ್ತರ ಕರ್ನಾಟಕಕ್ಕೆ ಪೈಪೋಟಿಯಿಂದ ಬರುತ್ತಿದ್ದಾರೆ. ರಾಹುಲ್‍ಗಾಂಧಿ ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಚಾರದಲ್ಲಿ ನಾವೇ ಮುಂದಿದ್ದೇವೆ. ಬೇರೆ ಪಕ್ಷಗಳ ತರ ಮಿರ್ಚಿ ಮಂಡಕ್ಕಿ ತಿಂದು ಡಾಬಾಗಳಿಗೆ ಹೋಗಿ ಪ್ರಚಾರ ಮಾಡಿಲ್ಲ ಎಂದು ಟೀಕಿಸಿದರು. ಅಮಿತ್‍ಶಾ ಅವರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಇಲ್ಲಿನ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷ ಉತ್ತರ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದ 2-3 ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತೇವೆ. ರಾಜ್ಯದ ಇತಿಹಾಸದಲ್ಲಿ ಚುನಾವಣೆ ಘೋಷಣೆ ಆಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ನಾವೇ. ಮೊದಲನೇ ಪಟ್ಟಿ ಬಿಡುಗಡೆ ಆದಾಗ ಅನೇಕರು ಲಘುವಾಗಿ ಮಾತನಾಡಿದ್ದಾರೆ ಎಂದು ತಿಳಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿದ್ಯುತ್ ಉತ್ಪಾದನೆ ಬಗ್ಗೆ ಭಾರೀ ಜಂಬಕೊಚ್ಚಿಕೊಳ್ಳಲಾಗುತ್ತಿದೆ. 2ಸಾವಿರ ಮೆಗಾವ್ಯಾಟ್ ಸೋಲಾರ್ ಏಕೆ ಉತ್ಪಾದನೆಯಾಗಿಲ್ಲ. ಯರಮರಸ್ ವಿದ್ಯುತ್ ಘಟಕ ಉದ್ಘಾಟನೆ ಮಾಡಿದ್ದಾರೆ. ದೊಡ್ಡದಾಗಿ ಜಾಹೀರಾತುಕೊಟ್ಟಿದ್ದಾರೆ. ಈ ಘಟಕ ಸ್ಥಾಪನೆಗೆ ನಿಮ್ಮ ಕೊಡುಗೆ ಏನು? ನಮ್ಮ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದೆ ಎಂದು ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಗಾದೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನೀವು ಕುದುರೆ ಏರಿದ್ದು, 3800ರೈತರ ಆತ್ಮಹತ್ಯೆ ಮಾಡಿಕೊಳ್ಳಲಿಕ್ಕಾ ಎಂದು ಹೇಳಿದರು. ಲಂಚ ತೆಗೆದುಕೊಳ್ಳೋದು ತಪ್ಪಲ್ಲ. ಸಿಕ್ಕಿ ಬೀಳೋದು ತಪ್ಪು ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿಮ್ಮ ಆರೋಗ್ಯ ಸಚಿವರ ಹೇಳಿಕೆ ಬಗ್ಗೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಉತ್ತರ ಕರ್ನಾಟಕ ಭಾಗದ ಹತ್ತಿ ಕಾರ್ಖಾನೆಗಳಿಗೆ ಯಾವುದೇ ಉತ್ತೇಜನ ಇಲ್ಲ. ಕಾರ್ಖಾನೆ ಮುಚ್ಚುವುದೇ ಸರ್ಕಾರದ ಸಾಧನೆಯಾಗಿದೆ, ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಏನು ಮಾಡಿದೆ? ಬಿಎ, ಬಿಎಡ್ ಓದಿದ ಮಕ್ಕಳಿಗೆ ಯಾವ ಉದ್ಯೋಗ ಕೊಟ್ಟಿದ್ದೀರಿ? 15ರೂ.ಗೆ ಸಿಗುವ ಒಂದು ಕ್ವಾರ್ಟರ್ ಮದ್ಯವನ್ನು 90ರೂ.ಗೆ ಮಾರಾಟ ಮಾಡುತ್ತಾರೆ. ಅನ್ನಭಾಗ್ಯದಿಂದ ಯಾರಿಗೂ ಉಪಯೋಗವಾಗಿಲ್ಲ ಎಂದರು.

ನಾನು ಯಾರ ಬೆಂಬಲ ಕೇಳಿಲ್ಲ:
ರಾಜ್ಯಸಭೆ ಸದಸ್ಯರ ಆಯ್ಕೆಗೆ ನಮ್ಮ ಪಕ್ಷ ಯಾರ ಬೆಂಬಲ ಕೇಳಿಲ್ಲ. ಸಂಖ್ಯೆಯ ಆಧಾರದ ಮೇಲೆ ನೀಡುವುದಾದರೆ ನಮಗೆ ಒಂದು ಸ್ಥಾನ ಸಿಗಬೇಕಾಗುತ್ತದೆ. ಕಾಂಗ್ರೆಸ್‍ನವರನ್ನು ಭಿಕ್ಷೆ ಕೇಳಿಲ್ಲ. ಮೂರನೆ ವ್ಯಕ್ತಿಯ ಆಯ್ಕೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿದರೆ ಹಾಕಲಿ. ನ್ಯಾಯಯುತವಾಗಿ ಮೂರನೆ ಅಭ್ಯರ್ಥಿ ಆಯ್ಕೆ ಜೆಡಿಎಸ್‍ಗೆ ಬಿಟ್ಟುಕೊಡಬೇಕು. ಬಿಟ್ಟುಕೊಡದೆ ಮೂರನೆ ವ್ಯಕ್ತಿ ಹಾಕಿದರೆ ಪಾಠ ಕಲಿಸುತ್ತೇವೆ. ಇಲ್ಲವಾದರೆ ನಮಗೂ ಒಂದು ಕಾಲ ಬರುತ್ತೆ . ಅವರೇ ಮೂರನೆ ವ್ಯಕ್ತಿಗೆ ನಮಗೆ ಅವಕಾಶ ಕೊಡಬೇಕೆಂದು ಕುಮಾರಸ್ವಾಮಿ ತಿಳಿಸಿದರು.

Sri Raghav

Admin