ಮಹಾರಾಜನಾದ ಯುವರಾಜ : ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ನಾಮಪತ್ರ ಸಲ್ಲಿಕೆ

Spread the love

Rahul--01

ನವದೆಹಲಿ, ಡಿ.4-ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ನಾಮಪತ್ರ ಸಲ್ಲಿಸಿದ್ದು, ಯುವರಾಜನಿಗೆ ಪಕ್ಷದ ಸಾರಥ್ಯದ ಪಟ್ಟಾಭಿಷೇಕಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಇದರೊಂದಿಗೆ 132 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್‍ನಲ್ಲಿ ಹೊಸ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಚರಿತ್ರೆಯಲ್ಲಿ ಪಕ್ಷದ ಮುಂದಾಳತ್ವ ವಹಿಸಲಿರುವ ಅತ್ಯಂತ ಕಿರಿಯ ವಯಸ್ಸಿನ ನಾಯಕ ಎಂಬ ಹೆಗ್ಗಳಿಕೆಗೆ 47 ವರ್ಷ ರಾಹುಲ್ ಗಾಂಧಿ ಪಾತ್ರರಾಗಲಿದ್ದಾರೆ. 19 ವರ್ಷಗಳ ಸುದೀರ್ಘ ಕಾಲ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿ ಅವರು ದೊಡ್ಡ ಜವಾಬ್ದಾರಿಯುತ ಹುದ್ದೆಯನ್ನು ತಮ್ಮ ಮಗನ ಹೆಗಲಿಗೆ ವಹಿಸಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ(ಎಐಸಿಸಿ)ಪಕ್ಷದ ಹಲವು ಧುರೀಣರೊಂದಿಗೆ ಅಧ್ಯಕ್ಷ ಸ್ಥಾನದ ಏಕೈಕ ಆಕಾಂಕ್ಷಿಯಾಗಿ ರಾಹುಲ್ ಉಮೇದುವಾರಿಕೆ ಸಲ್ಲಿಸುವ ಮೂಲಕ ಅವರ ಅವಿರೋಧ ಆಯ್ಕೆಗೆ ಹಾದಿ ಸುಗಮವಾಗಿದೆ. ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಆರು ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ಮುಖಂಡರು ನಾಮಪತ್ರಕ್ಕೆ ಅನುಮೋದಕರಾಗಿ ಮತ್ತು ಸೂಚಕರಾಗಿ ಸಹಿ ಮಾಡಿದ್ದಾರೆ.

Rahul--06

ದೆಹಲಿಯಲ್ಲಿ ಇಂದು ಕಾಂಗ್ರೆಸ್ ಪಾಳೆಯದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಬಿಳಿ ಜುಬ್ಬಾ ಮತ್ತು ಪೈಜÁಮ ಧರಿಸಿ ಮೇಲೆ ಕಪ್ಪು ವೇಸ್ಟ್‍ಕೋಟ್ ಧರಿಸಿದ್ದ ಕಾಂಗ್ರೆಸ್ ಯುವರಾಜ ಇಂದು ಅಧ್ಯಕ್ಷ ಹುದ್ದೆಗೇರಲು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಕಾಂಗ್ರೆಸ್ ಘಟಾನುಘಟಿಗಳು ರಾಜಧಾನಿಯಲ್ಲಿ ಬೀಡುಬಿಟ್ಟಿದ್ದರು.  ಆರು ರಾಜ್ಯಗಳ ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯ, ಪಂಜÁಬ್‍ನ ಅಮರೀಂದರ್ ಸಿಂಗ್, ಹಿಮಾಚಲ ಪ್ರದೇಶದ ವೀರಭದ್ರ ಸಿಂಗ್, ಪುದುಚೇರಿಯ ವಿ. ನಾರಾಯಣಸ್ವಾಮಿ, ಮೇಘಾಲಯದ ಮುಖಲ್ ಸಂಗ್ಮಾ ಮತ್ತು ಮೀಜೋರಾಂನ ಲಾಲ್ ಥಾನ್‍ಹಲ್ವಾ ಅವರೂ ಸೂಚಕರಾಗಿ ಸಹಿ ಮಾಡಿದ್ದಾರೆ.

Rahul--05

ಈ ಅನುಮೋದಕರು ಮತ್ತು ಸೂಚಕರ ಸಹಿಯೊಂದಿಗೆ ಇಂದು ಬೆಳಗ್ಗೆ 10.30ರಲ್ಲಿ ರಾಹುಲ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಚುನಾವಣಾಧಿಕಾರಿ ಅವರಿಗೆ ನಾಮಪತ್ರ ಸಲ್ಲಿಸಿದರು.  ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು. ಭಾನುವಾರದಿಂದ ಯಾರೊಬ್ಬರೂ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ರಾಹುಲ್ ಎಐಸಿಸಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಲು ಹಾದಿ ಸುಗಮವಾಗಿದೆ ಎಂದು ಪಕ್ಷದ ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.   ನಾಮಪತ್ರ ವಾಪಸ್ ಪಡೆಯಲು ಡಿ.11 ಕೊನೆ ದಿನವಾಗಿದ್ದು, ಅಗತ್ಯವಿದ್ದರೆ ಡಿ.16ರಂದು ಮತದಾನ ಮತ್ತು ಡಿ.19ರಂದು ಫಲಿತಾಂಶ ಎಂದು ಕಾಂಗ್ರೆಸ್ ಚುನಾವಣಾ ವೇಳಾಪಟ್ಟಿಯಲ್ಲಿ ತಿಳಿಸಲಾಗಿತ್ತು.

Rahul--04

ಹಿರಿಯ ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಅಜಾದ್, ಎ.ಕೆ.ಆಂಟನಿ, ಪಿ.ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಅಹಮದ್ ಪಟೇಲ್, ಜೋತಿರಾದಿತ್ಯ ಸಿಂದಿಯಾ, ಆರು ರಾಜ್ಯಗಳ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರು ಸಂಸದರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು.  ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಅವರು ರಾಜ್‍ಘಾಟ್‍ನಲ್ಲಿರುವ ಶಿವ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‍ನ ಇತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Rahul--02

Facebook Comments

Sri Raghav

Admin