ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ.ವರೆಗೂ ಸಾಲ

Spread the love

Women--01

ಬೆಂಗಳೂರು, ಮೇ 20- ಮಹಿಳಾ ಉದ್ಯಮಿಗಳಿಗೆ ಎರಡು ಕೋಟಿ ರೂ.ವರೆಗೂ ಸಾಲ ನೀಡುವ ನೂತನ ಯೋಜನೆಯನ್ನು ಸೋಮವಾರದಿಂದ ಜಾರಿಗೆ ತರಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿಗಳಿಗೆ ಈವರೆಗೂ 5ರಿಂದ 50ಲಕ್ಷ ರೂ.ಸಾಲ ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಎರಡು ಕೋಟಿ ರೂ.ವರೆಗೆ ಹೆಚ್ಚಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಜಾರಿಯಾಗಿದ್ದು, ಸೋಮವಾರ ಚಾಲನೆ ನೀಡಲಾಗುತ್ತದೆ ಎಂದರು.

ಮೇ 22ರಂದು ಬೆಳಗ್ಗೆ 11 ಗಂಟೆಗೆ ಕಾಸಿಯಾ ಸಭಾಂಗಣದಲ್ಲಿ ಮಹಿಳಾ ಉದ್ಯಮಿಗಳೊಡನೆ ರಾಜ್ಯ ಮಟ್ಟದ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ನೂತನ ಸಾಲದ ಆದೇಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.  ಬದಲಾವಣೆಗಾಗಿ ಧೈರ್ಯವುಳ್ಳವರಾಗಿ ಎಂಬ ಘೋಷಣೆಯೊಂದಿಗೆ ಸಂವಾದ ಕಾರ್ಯಕ್ರಮ ಆಯೊಜಿಸಿದ್ದು, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿವೆ. ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಪ್ರಿಯಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.ಕೇಂದ್ರ ಸಚಿವ ಅನಂತ್‍ಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಎನ್.ಎ.ಹ್ಯಾರಿಸ್, ಮೇಯರ್ ಪದ್ಮಾವತಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಈವರೆಗೂ 419 ಮಹಿಳಾ ಉದ್ಯಮಿದಾರರಿಗೆ ಬಡ್ಡಿ ಸಹಾಯ ಧನ ನೀಡಿದೆ. 2 ಕೋಟಿ ಸಾಲಕ್ಕೆ ಶೇ.14ರಷ್ಟು ಬಡ್ಡಿ ಇದ್ದು, ಅದರಲ್ಲಿ ಶೇ.10ರಷ್ಟು ಸರ್ಕಾರ ತುಂಬಿಕೊಡಲಿದೆ. ಫಲಾನುಭವಿಗಳು ಶೇ.4ರಷ್ಟನ್ನು ಮಾತ್ರ ಭರಿಸಬೇಕಿದೆ ಎಂದು ಅವರು ಹೇಳಿದರು. ಕೆಎಸ್‍ಎಫ್‍ಸಿಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ವಿ.ನಿಲುಗಲ್ ಮಾತನಾಡಿ, ಕೆಎಸ್‍ಎಫ್‍ಸಿ ಆರಂಭವಾದಾಗಿನಿಂದ ಈವರೆಗೂ ಸುಮಾರು 29 ಸಾವಿರ ಮಹಿಳಾ ಉದ್ಯಮಿಗಳಿಗೆ 3200 ಕೋಟಿ ರೂ. ಹಣಕಾಸಿನ ನೆರವು ನೀಡಿದೆ. 50 ಲಕ್ಷ ಸಾಲದ ಯೋಜನೆಯಲ್ಲಿ 419 ಮಹಿಳೆಯರಿಗೆ 169 ಕೋಟಿ ನೆರವು ನೀಡಿದೆ ಎಂದು ಹೇಳಿದರು.

ಎಲ್ಲಾ ಯೋಜನೆಗಳಿಗೂ ಶೇ.100ರಷ್ಟು ಸಾಲದ ಭದ್ರತೆಯನ್ನು ಕೇಳುವುದಿಲ್ಲ. ಆಯ್ದ ಯೋಜನೆಗಳಿಗೆ ಮಾತ್ರ ಕೇಳಲಾಗುತ್ತದೆ. ಉಳಿದಂತೆ ಕಟ್ಟಡ, ನಿವೇಶನಗಳಿಗೆ ಭದ್ರತೆಯ ಅಗತ್ಯವಿಲ್ಲ, ಯಂತ್ರೋಪಕರಣಗಳ ಮೊತ್ತದ ಮೇಲೆ ಶೇ.30ರಷ್ಟು ಭದ್ರತೆ ಒದಗಿಸಿದರೆ ಸಾಲ ನೀಡಲಾಗುವುದು ಎಂದು ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin