ಮಹಿಳೆಯರನ್ನೂ ಹೆಚ್ಚಾಗಿ ಕಾಡುತ್ತಿದೆ ಹೃದಯಾಘಾತದ ಭೂತ..!

Women--01

ಹಿಂದೆ ಹೆಚ್ಚಾಗಿ ಕೇವಲ ಪುರುಷರ ಖಾಯಿಲೆ ಎಂದು ಪರಿಗಣಿಸಲಾಗಿದ್ದ ಹೃದಯ ರೋಗ ಇಂದು ಮಹಿಳೆಯರಲ್ಲೂ ನಂಬರ್ ಒನ್ ಕೊಲೆಗಾರ ಎಂದು ಸ್ವೀಕೃತವಾಗಿದೆ. ಪ್ರತಿವರ್ಷ ಮೂರು ಸಾವುಗಳ ಪೈಕಿ ಒಂದಕ್ಕೆ ಕಾರಣವಾಗುತ್ತಿದೆ. ಅಂದರೆ ಪ್ರತಿ 80 ಸೆಕೆಂಡಿಗೆ ಒಬ್ಬ ಮಹಿಳೆ ಇದಕ್ಕೆ ಬಲಿಯಾಗುತ್ತಿದ್ದಾರೆ. ಹ ದಯ ರಕ್ತನಾಳಗಳ ರೋಗ(ಸಿಎಡಿ) ಎಂದರೆ ಹೃದಯದ ಮಾಂಸಖಂಡಗಳಿಗೆ ರಕ್ತ ಪೂರೈಸುವ ರಕ್ತನಾಳಗಳನ್ನು ಒಳಗೊಂಡಿರುತ್ತದೆ. ಈ ರಕ್ತನಾಳಗಳ ಒಳಮೈನ ಮೇಲೆ ಪದರಗಳು ಶೇಖರಣೆಗೊಂಡು ರಕ್ತದ ಹರಿವು ಕಡಿಮೆಯಾಗುತ್ತದೆ ಅಥವಾ ಹರಿವಿಗೆ ಸಂಪೂರ್ಣ ತಡೆ ಉಂಟಾಗುತ್ತದೆ.

ಇದರಿಂದ ಉಂಟಾಗುವ ರಕ್ತದ ಹರಿವಿನ ಇಳಿಕೆಯಿಂದ ಹೃದಯದ ಮಾಂಸಖಂಡದ ಆಯಾ ಭಾಗಗಳಿಗೆ ತೀವ್ರ ಹಾನಿ ಅಥವಾ ಅವು ಮೃತಪಡುವುರಿಂದ ಹೃದಯಾಘಾತ ಸಂಭವಿಸುತ್ತದೆ. ಅಂಕಿಅಂಶಗಳ ಪ್ರಕಾರ ಪುರುಷರಿಗೆ ಹೋಲಿಸಿದಲ್ಲಿ ಹೃದಯಾಘಾತಗಳು ಮಹಿಳೆಯರಿಗೆ ಹೆಚ್ಚು ಮಾರಕ ಅಲ್ಲದೆ, ವೈಕಲ್ಯ ಉಂಟು ಮಾಡುತ್ತವೆ. ಮೊದಲ ಹೃದಯಾಘಾತದಲ್ಲೆ ಪುರುಷರಿಗಿಂತ ಕಡಿಮೆ ಸಂಖ್ಯೆಯ ಮಹಿಳೆಯರು ಉಳಿದುಕೊಳ್ಳುವುದು ಕಂಡುಬಂದಿದೆ. ಮಹಿಳೆಯರಲ್ಲಿ ಶೇ.38ರಷ್ಟು ಮಂದಿಗೆ ಮೊದಲ ಹೃದಯಾಘಾತದ ಒಂದು ವರ್ಷದ ಒಳಗೆ ಮೃತಪಡುತ್ತಾರೆ. ಪುರುಷರಲ್ಲಿ ಶೇ.25ರಷ್ಟು ಮಂದಿ ಮೃತಪಡುವುದು ಕಂಡುಬಂದಿದೆ.

ಬ ಹುಶಃ ಮಹಿಳೆಯರಲ್ಲಿ ಹಾರ್ಮೋನ್ ಅಥವ ವಂಶವಾಹಿ ವ್ಯತ್ಯಾಸಗಳು ಅವರ ರಕ್ತನಾಳಗಳು ಪ್ರತಿಕ್ರಿಯಿಸುವ ರೀತಿಯನ್ನು ಬದಲಾಯಿಸುತ್ತವೆ. ಮಹಿಳೆಯರಲ್ಲಿ ಹೆಚ್ಚು ಸಮನಾದ ರೀತಿಯಲ್ಲಿ ರಕ್ತನಾಳಗಳ ಗೋಡೆಗಳ ಮೇಲೆ ಪದರ ಹರಡುವುದು ಕಂಡುಬಂದಿದೆ. ಪುರುಷರಲ್ಲಿ ಈ ಪದರಗಳಲ್ಲಿ ಅಲ್ಲಲ್ಲಿ ಉಬ್ಬುಗಳು ಕಂಡುಬರುತ್ತವೆ. ಪ್ರಸ್ತುತ ರೋಗ ನಿರ್ಧಾರ ಪರೀಕ್ಷೆಗಳು ರಕ್ತನಾಳದ ಪದರಗಳಲ್ಲಿ ಉಬ್ಬಿರುವುದನ್ನು ಗಮನಿಸುತ್ತವೆ. ಬಹುಶಃ ಹೃದಯಾಘಾತಕ್ಕೆ ಒಳಗಾಗುವ ಮಹಿಳೆಯರ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳಲ್ಲಿ ಈ ಪರೀಕ್ಷೆಗಳ ಸಂದರ್ಭದಲ್ಲಿ ರಕ್ತದ ಹರಿವಿಗೆ ಸ್ಪಷ್ಟವಾದ ತಡೆ ಇರುವುದು ಕಾಣುವುದಿಲ್ಲ. ಅನಿಗದಿತ ಮಿಡಿತಕ್ಕೆ ಮಹಿಳೆಯರ ಹೃದಯಗಳು ಸುಲಭವಾಗಿ ತುತ್ತಾಗುತ್ತವೆ. ಆದರೆ, ಗಂಡಸರಲ್ಲಿನ ಪುರುಷ ಹಾರ್ಮೋನ್-ಟೆಸ್ಟೋಸ್ಟೆರಾನ್ ಸಂರಕ್ಷಣಾತ್ಮಕ ಪರಿಣಾಮವನ್ನು ಪೂರೈಸುತ್ತದೆ.

ಹೆಂಗಸರಲ್ಲಿ ಮಹಿಳಾ ಹಾರ್ಮೋನ್ ಆದ ಎಸ್ಟ್ರೋಜೆನ್ ಹೃದಯದ ನಡುಕ ಮತ್ತು ಅಸಾಧಾರಣ ಮಿಡಿತಗಳಿಗೆ ಸಂವೇದಿಸುವುದನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಔಷಧಗಳ ದುಷ್ಪರಿಣಾಮವಾಗಿ ಅಸಾಧಾರಣ ಹೃದಯದ ಮಿಡಿತಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಂಡಾಶಯದ ಹಾರ್ಮೋನ್‍ಗಳು ಮಹಿಳೆಯರಲ್ಲಿ ಮುಟ್ಟು ನಿಲ್ಲುವವರೆಗೆ ಸರಾಸರಿಯಾಗಿ ಪುರುಷರಿಗಿಂತ ಕಡಿಮೆ ರಕ್ತದೊತ್ತಡ ಇರುವಂತೆ ಮಾಡುತ್ತದೆ. ಜೊತೆಗೆ ಯುವ ಮಹಿಳೆಯರಲ್ಲಿ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಂರಕ್ಷಣಾತ್ಮಕ ಪಾತ್ರವನ್ನು ಇದು ವಹಿಸುತ್ತದೆ. ಆದರೆ, 60ರ ವಯಸ್ಸಿನ ಹೊತ್ತಿಗೆ ಪುರುಷರಿಗಿಂತ ಮಹಿಳೆಯರಲ್ಲಿ ಉನ್ನತ ರಕ್ತದೊತ್ತಡ ಹೆಚ್ಚು ಸಾಮಾನ್ಯವಾಗಿರುತ್ತದೆ. ಅಲ್ಲದೆ, ಮುಟ್ಟು ನಿಂತ ನಂತರ ಉನ್ನತ ರಕ್ತದ ಕೊಲೆಸ್ಟ್ರಾಲ್‍ನಿಂದ ಮಹಿಳೆಯರು ಹೆಚ್ಚಾಗಿ ರಕ್ತನಾಳಗಳಲ್ಲಿ ಅಡ್ಡಿವುಂಟಾಗುವ ತೊಂದರೆಗೆ ಒಳಗಾಗುತ್ತಾರೆ. ಅದರಲ್ಲೂ ನಿರಂತರವಾಗಿ ರಕ್ತದಲ್ಲಿ ಹರಿಯುವ ಕೊಬ್ಬಿನ ವಸ್ತುವಾದ ಉನ್ನತಮಟ್ಟದ ಟ್ರೈಗ್ಲಿಸೆರೈಡ್ಸ್‍ನ ಹಾಜರಿಯನ್ನು ಇದು ಹೆಚ್ಚಿಸುತ್ತದೆ.ಹೆಚ್ಚಿನ ರಕ್ತದೊತ್ತಡ ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪಾಶ್ರ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ರಕ್ತದೊತ್ತಡಕ್ಕೆ ಪುರುಷರಿಗಿಂತ ಪ್ರತ್ಯೇಕವಾದ ರೀತಿಯಲ್ಲಿ ಮಹಿಳೆಯರು ಪ್ರತಿಕ್ರಿಯಿಸುವುದು ಕಂಡುಬಂದಿದೆ.
ಪುರುಷರಿಗಿಂತ ಹೆಚ್ಚು ವಯಸ್ಸಾದ ನಂತರ ಜೀವನದಲ್ಲಿ ಹೃದಯಾಘಾತವನ್ನು ಮಹಿಳೆಯರು ಅನುಭವಿಸುವುದು ಕಂಡುಬಂದಿದ್ದರೂ ಅವರು ಸಾಮಾನ್ಯವಾಗಿ ಇತರೆ ರೋಗಗಳಿಗೆ(ಸಂಧಿವಾತ ಅಥವ ಅಸ್ಥಿರಂಧ್ರತೆ ಮುಂತಾದವುಗಳು) ತುತ್ತಾಗುತ್ತಾರೆ ಅಲ್ಲದೆ, ಇದು ಅವರಲ್ಲಿನ ಹೃದಯಾಘಾತದ ಲಕ್ಷಣಗಳನ್ನು ಮರೆಮಾಚುತ್ತದೆ. ಹೀಗಾಗಿ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪ್ರತ್ಯೇಕವಾಗಿದ್ದು ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಕಂಡುಬಂದಿದೆ. ಮಹಿಳೆಯರಿಗೆ ಸಾಂಪ್ರದಾಯಿಕ ಲಕ್ಷಣಗಳಾದ ತೀವ್ರ ರೀತಿಯ ಎದೆನೋವು, ಉಸಿರಾಟದಲ್ಲಿ ತೊಂದರೆ, ಎಡಗೈ ಜೋಮು ಹಿಡಿಯುವುದು ಮುಂತಾದವು ಕಾಣಿಸಿಕೊಳ್ಳುವುದು ಕಡಿಮೆಯಾಗಿರಬಹುದು. ವಹಿಳೆಯರಲ್ಲಿ ಮೂರನೇ ಎರಡರಷ್ಟು ಪ್ರಕರಣಗಳಲ್ಲಿ ಈ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಸಾಮಾನ್ಯವಾಗಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತವೆ.  ¸
ಸುಸ್ತು, ಬೆವರುವುದು, ತಲೆ ತಿರುಗುವುದು ಅಥವ ದವಡೆಯ ನೋವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇವು ಪ್ರತ್ಯೇಕತೆ ಹೊಂದಿರದಿರಬಹುದು. ಆದರೆ, ಇವುಗಳ ಪರಿಣಾಮ ಆಘಾತಕಾರಿಯಾಗಿರಬಹುದು. ವ್ಯಾಯಾಮ ಒತ್ತಡ ಪರೀಕ್ಷೆ ಅಥವ ಸ್ಟ್ರೆಸ್ ಇಸಿಜಿ ಪರೀಕ್ಷೆಯ ಫಲಿತಾಂಶ ಕೂಡ ಮಹಿಳೆಯರಲ್ಲಿ ಕಡಿಮೆ ನಿಖರತೆ ಹೊಂದಿರಬಹುದು. ಡೊಬುಟಮೈನ್ ಸ್ಟ್ರೆಸ್ ಎಕೊಕಾರ್ಡಿಯೋಗ್ರಾಫಿ ಮತ್ತು ಎಕ್ಸ್‍ರ್‍ಸೈಸ್ ಥಾಲಿಯಮ್ ಮಯೋಕಾರ್ಡಿಯಲ್ ಸೈಂಟಿಗ್ರಾಫಿಗಳು ಮಹಿಳೆಯರಲ್ಲಿ ಹೃದಯ ರಕ್ತನಾಳ ರೋಗವನ್ನು ಗುರುತಿಸುವಲ್ಲಿ ಹೆಚ್ಚು ನಂಬಿಕಾರ್ಹ ಕ್ರಮಗಳಾಗಿವೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಜೀವನಶೈಲಿ ಬದಲಾವಣೆ ಮತ್ತು ಜಾಗೃತಿಗಳು ಹೃದಯ ರೋಗಗಳನ್ನು ಶೇ.80ರಷ್ಟು ತಡೆಯಬಹುದು. ಆದ್ದರಿಂದ ಎಚ್ಚರಿಕೆಯಿಂದಿರಿ, ಸಿದ್ಧವಾಗಿರಿ.

ಮಹಿಳೆಯರಲ್ಲಿ ಹೃದಯ ರಕ್ತನಾಳಗಳ ರೋಗದ (ಸಿಎಡಿ) ಅಪಾಯದ ಅಂಶಗಳು ಈ ಕೆಳಗಿನಂತಿವೆ:

> 60ಕ್ಕೂ ಹೆಚ್ಚಿನ ವಯಸ್ಸಾಗಿರುವುದು ಅ ಸೋದರ ಸಂಬಂಧದಲ್ಲಿ ಅಥವಾ ಇಬ್ಬರು ಪೋಷಕರಲ್ಲಿ ಒಬ್ಬರು 55 ವರ್ಷಕ್ಕೆ ಮುನ್ನ ಹೃದಯಾಘಾತದಿಂದ ಮೃತಪಟ್ಟ ಕೌಟುಂಬಿಕ ಇತಿಹಾಸ.
>  ಸೂಕ್ತ ದೇಹತೂಕಕ್ಕಿಂತ ಶೇ.30ಕ್ಕಿಂತ ಹೆಚ್ಚಾಗಿರುವುದು. ಅದರಲ್ಲೂ ಕೊಬ್ಬು ಪೃಷ್ಠದ ಸುತ್ತ ಕಾಣಿಸುವುದಕ್ಕಿಂತ ಸೊಂಟದ ಸುತ್ತ ಸೇರಿಕೊಂಡಿರುವುದು ಅಪಾಯಕಾರಿ.
>   ಉನ್ನತ ಒಟ್ಟಾರೆ ಕೊಲೆಸ್ಟ್ರಾಲ್(200ಕ್ಕೂ ಹೆಚ್ಚು), ಕಡಿಮೆ ಎಚ್‍ಡಿಎಲ್(45ಕ್ಕೂ ಕಡಿಮೆ), ಉನ್ನತ ಟ್ರೈಗ್ಲಿಸೆರೈಡ್ಸ್(200ಕ್ಕೂ ಹೆಚ್ಚು) ಮತ್ತು ಉನ್ನತಮಟ್ಟದ ಎಲ್‍ಡಿಎಲ್ ಅಥವ ಬ್ಯಾಡ್ ಕೊಲೆಸ್ಟ್ರಾಲ್(130ಕ್ಕೂ ಹೆಚ್ಚು) ಇರುವುದು ಹೃದಯ ರಕ್ತನಾಳಗಳ ಅಪಾಯವನ್ನು ಹೆಚ್ಚಿಸುತ್ತದೆ.
> ಉನ್ನತ ರಕ್ತದೊತ್ತಡ
> ಮಧುಮೇಹ ಮಹಿಳೆಯರಲ್ಲಿ ಹೃದಯ ರಕ್ತನಾಳದ ರೋಗದ ಅಪಾಯವನ್ನು 4ರಿಂದ 6 ಪಟ್ಟುಹೆಚ್ಚಿಸುತ್ತದೆ.
>  ಅವಧಿಗೆ ಮುನ್ನ ಮುಟ್ಟು ನಿಲ್ಲುವುದು (38 ವರ್ಷಕ್ಕೆ ಮುನ್ನ) ಹೃದಯ ರಕ್ತನಾಳಗಳ ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
> ಧೂಮಪಾನ, ವ್ಯಾಯಾಮದ ಕೊರತೆ, ಒತ್ತಡ, ಗರ್ಭನಿಯಂತ್ರಣ ಮಾತ್ರೆಗಳ ಬಳಕೆ, ಮಾದಕ ದ್ರವ್ಯಗಳ ಬಳಕೆ ಮುಂತಾದವು ಮಹಿಳೆಯರಲ್ಲಿ ಜೀವನಶೈಲಿ >  ಸಂಬಂಧಿ ಅಪಾಯಗಳಾಗಿದ್ದು, ಹೃದಯ ರಕ್ತನಾಳಗಳ ರೋಗವನ್ನು ಹೆಚ್ಚಿಸುತ್ತವೆ.

Sri Raghav

Admin