ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಕಂಡಕ್ಟರ್’ಗೆ ಧರ್ಮೇದೇಟು

Conductor--02

ಕುಣಿಗಲ್, ಡಿ.12- ಮಹಿಳಾ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸಿದ ನಿರ್ವಾಹಕನಿಗೆ ಸಹ ಪ್ರಯಾಣಿಕರು ಗೂಸಾ ಕೊಟ್ಟಿರುವ ಘಟನೆ ಹಾಸನ-ಬೆಂಗಳೂರು ಬಸ್‍ನಲ್ಲಿ ತಡ ರಾತ್ರಿ ನಡೆದಿದೆ. ಜವಾಹರ್ ಅಹಮದ್ ಅಸಭ್ಯವಾಗಿ ವರ್ತಿಸಿದ ಕೆಎಸ್‍ಆರ್‍ಟಿಸಿ ನಿರ್ವಾಹಕ. ಹೊಳೆನರಸೀಪುರ ಡಿಪೋಗೆ ಸೇರಿದ ಬಸ್ ನಿನ್ನೆ ರಾತ್ರಿ ಹೊಳೆನರಸೀಪುರದಿಂದ ಬೆಂಗಳೂರಿಗೆ ಕುಣಿಗಲ್ ಮಾರ್ಗವಾಗಿ ತೆರಳುತ್ತಿದ್ದು, ಈ ವೇಳೆ ನಿರ್ವಾಹಕ ಸೀಟ್ ಪಕ್ಕದಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜತೆ ಚಾಕೊಲೇಟ್ ಕೊಟ್ಟು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾನೆ.

ಬೆಳ್ಳೂರು ಕ್ರಾಸ್‍ಗೆ ಬಂದಾಗ ನಿರ್ವಾಹಕನ ಅಸಭ್ಯ ವರ್ತನೆ ಹೆಚ್ಚಾಗಿ ಬಸ್‍ನ ಲೈಟ್ ಆಫ್ ಮಾಡಿದಾಗ ಮೈ ಕೈ ಮುಟ್ಟಿದ ಎಂದು ಮಹಿಳೆ ದೂರಿದ್ದಾರೆ. ಈ ಬಗ್ಗೆ ಮಹಿಳೆ ಸಹ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದು , ಇದರಿಂದ ರೊಚ್ಚಿಗೆದ್ದ ಸಹ ಪ್ರಯಾಣಿಕರು ನಿರ್ವಾಹಕನಿಗೆ ಹಿಡಿದು ಥಳಿಸಿದ್ದಾರೆ. ನಿರ್ವಾಹಕನನ್ನು ಕುಣಿಗಲ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sri Raghav

Admin