ಮಹೂರ್ತ ಫಿಕ್ಸ್ : ಉಕ್ಕಿನ ಸೇತುವೆ ನಿರ್ಮಾಣಕ್ಕೆ ನ.1ರಂದು ಶಂಕು ಸ್ಥಾಪನೆ

Steel-Bridge-Bengaluru

ಬೆಂಗಳೂರು, ಅ.22- ಸಾರ್ವಜನಿಕರ ತೀವ್ರ ವಿರೋಧ ಹಾಗೂ ಪ್ರತಿಪಕ್ಷಗಳ ಆಕ್ಷೇಪದ ನಡುವೆಯೂ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ವಿವಾದಿತ ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಇಂದು ಕಾರ್ಯಾದೇಶ ನೀಡಿದೆ.ಉಕ್ಕಿನ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪನಿಗೆ ಕಾರ್ಯಾದೇಶ ನೀಡಲಾಗಿದ್ದು, ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೊದಲ ಹಂತವಾಗಿ 98 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಯಾರ ವಿರೋಧವನ್ನೂ ಲೆಕ್ಕಿಸದ ರಾಜ್ಯ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಮುಹೂರ್ತ ನಿಗದಿ ಮಾಡಿದ್ದು, ನವೆಂಬರ್ 1 ರಂದು ಗುದ್ದಲಿ ಪೂಜೆ ಮಾಡಲು ನಿರ್ಧಾರ ಕೈಗೊಂಡಿದೆ.

ಉಕ್ಕಿನ ಸೇತುವೆ ನಿರ್ಮಾಣ ವಿರೋಧಿಸಿ ನಗರದಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಪರಿಸರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಪಕ್ಷಗಳು ಯೋಜನೆ ಹಿಂದೆ ಹಣ ಲೂಟಿಯ ದುರುದ್ದೇಶವಿದೆ ಎಂದು ನೇರ ಆರೋಪ ಮಾಡಿವೆ. ಇಷ್ಟಾದರೂ ಸಚಿವರು ಸರ್ಕಾರವನ್ನು ಸಮರ್ಥಿಸಿಕೊಂಡೇ ಬಂದಿದ್ದು, ಇದೀಗ ತರಾತುರಿಯಲ್ಲಿ ಕಾರ್ಯಾದೇಶ ನೀಡಿದ್ದಾರೆ.ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ 810 ಬೃಹತ್ ಮರಗಳನ್ನು ಕಡಿಯಬೇಕು ಎನ್ನುವುದು ಯೋಜನೆ ವಿರೋಧಕ್ಕೆ ಪ್ರಮುಖ ಕಾರಣ. ಅಲ್ಲದೆ ಮೊದಲು 1300 ಕೋಟಿ ರೂ.ಅಂದಾಜು ವೆಚ್ಚ ಮಾಡುವ ಪ್ರಸ್ತಾವನೆ ಇತ್ತು. ಈಗ ಅಂದಾಜು ವೆಚ್ಚ 1800 ಕೋಟಿಗೆ ಏರಿಕೆಯಾಗಿದೆ. 500 ಕೋಟಿ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಆದರೆ ಇನ್ನೊಂದು ಪ್ರಮುಖ ಕಾರಣವೆಂದರೆ ಉಕ್ಕಿನ ಸೇತುವೆ ಮೇಲೆ ಸಂಚಾರಕ್ಕೆ ಟೋಲ್ ಶುಲ್ಕ ಸಂಗ್ರಹ ಮಾಡುವುದಾಗಿ ಸರ್ಕಾರ ಹೇಳಿರುವುದು. 1800 ಕೋಟಿ ಸಾರ್ವಜನಿಕರ ಹಣವನ್ನು ಸರ್ಕಾರ ಖರ್ಚು ಮಾಡಿಯೂ ಮತ್ತೆ ಟೋಲ್ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರಿಂದಲೇ ಹಣ ವಸೂಲಿಗೆ ಮುಂದಾಗಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.ಇಷ್ಟೆಲ್ಲಾ ವಿವಾದವಿದ್ದರೂ ಸರ್ಕಾರ ತರಾತುರಿಯಲ್ಲಿ ಯೋಜನೆ ಆರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

 

► Follow us on –  Facebook / Twitter  / Google+

Sri Raghav

Admin