ಮಾಜಿ ಸಿಎಂ ಯಡಿಯೂರಪ್ಪನವರಿಗೆ ಇಂದು 74ನೇ ಹುಟ್ಟಹಬ್ಬ, ಧವಳಗಿರಿಯಲ್ಲಿ ಹಬ್ಬದ ಸಂಭ್ರಮ

Yadiyurappa-Tumakuru-2 ಬೆಂಗಳೂರು,ಫೆ.27– ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು 74ನೇ ಹುಟ್ಟಹಬ್ಬದ ಸಂಭ್ರಮ.   ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿಯಲ್ಲಿ ಬೆಳಗಿನಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಮ್ಮ ನೆಚ್ಚಿನ ನಾಯಕನಿಗೆ ಪಕ್ಷದ ಮುಖಂಡರು ಶುಭಕೋರಿ ನೂರ್ಕಾಲ ಬಾಳಲಿ ಎಂದು ಹಾರೈಸಿದರು.   ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮುಖಂಡರಾದ ಜಗದೀಶ್ ಶೆಟ್ಟರ್, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ , ವಿ.ಸೋಮಣ್ಣ, ಪ್ರಹ್ಲಾದ್ ಜೋಷಿ, ಗೋವಿಂದ ಕಾರಜೋಳ, ಶೋಭಕರಂದ್ಲಾಜೆ, ಎಂ.ಪಿ.ರೇಣುಕಚಾರ್ಯ, ಪ್ರತಾಪ್‍ಸಿಂಹ, ಪಿ.ಸಿ.ಮೋಹನ್, ಎಸ್.ಸುರೇಶ್‍ಕುಮಾರ್, ಕಟ್ಟಾಸುಬ್ರಹ್ಮಣ್ಯ ನಾಯ್ಡು , ಶಾಸಕರಾದ ಮುನಿರಾಜು, ಎಸ್.ಆರ್.ವಿಶ್ವನಾಥ್, ಸುರೇಶ್‍ಗೌಡ ಸೇರಿದಂತೆ ಮತ್ತಿತರ ಪ್ರಮುಖರು ಶುಭ ಕೋರಿದರು.

Yadiyurappa-Tumakuru-3

ರಾಜ್ಯದ ವಿವಿಧ ಭಾಗಗಳಿಂದಲೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಮೆಚ್ಚಿನ ನಾಯಕನನ್ನು ನೋಡಲು ಅವರ ನಿವಾಸಕ್ಕೆ ಆಗಮಿಸಿದ್ದರು. ರಾಜ್ಯದ ಅನೇಕ ಕಡೆ ಅವರ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣುಹಂಪಲು ಸಿಹಿಹಂಚಿ ಸಂಭ್ರಮಿಸಲಾಯಿತು.

ಗ್ಲಾಸ್ ಪುಡಿಪುಡಿ:

ಯಡಿಯೂರಪ್ಪನವರನ್ನು ನೋಡಲು ಭಾರೀ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರಿಂದ ಅವರ ನಿವಾಸ ಹಾಲ್‍ನ ಗ್ಲಾಸ್‍ಗಳು ಪುಡಿಪುಡಿಯಾದವು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ನೂಕುನುಗ್ಗಲು, ತಳ್ಳಾಟ ನೂಕಾಟ ಉಂಟಾಗಿ ಕಿಟಕಿಯ ಗ್ಲಾಸ್‍ಗಳು ಒಡೆದು ಹೋದವು. ಕೊನೆಗೆ ಕಾರ್ಯಕರ್ತರ ಒತ್ತಾಸೆಯಂತೆ ಬಿಎಸ್‍ವೈ ಮನೆ ಮುಂಭಾಗಕ್ಕೆ ಬಂದು ಅಭಿಮಾಗಳಿಂದ ಹೂಗುಚ್ಛ ಪಡೆದರು.   ಬಳಿಕ ತುಮಕೂರಿನಲ್ಲಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರನ್ನು ಭೇಟಿ ಮಾಡಲು ತೆರಳಿದರು.

Yadiyurappa-Tumakuru-4

ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ತಮ್ಮದಾಗಿದೆ ಎಂದು ಹೇಳಿದರು. ಯಾವ ಪಕ್ಷದ ಬೆಂಬಲವನ್ನು ಪಡೆಯದೆ ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಪಕ್ಷ ಸಂಘಟನೆ ರಾಜ್ಯ ಪ್ರವಾಸದತ್ತ ಗಮನಹರಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದ್ದು , ಜನರಿಂದ ನಿರೀಕ್ಷೆಗೂ ಮೀರಿದ ಬೆಂಬಲ ಸಿಗುತ್ತದೆ. ಈಗಿನ ಲೆಕ್ಕಾಚಾರವನ್ನು ಅವಲೋಕಿಸಿದರೆ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಅನುಮಾನ ಬೇಡ ಎಂದರು.

Kumar-Bangarappa--02

ಈ ಬಾರಿ ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಹೀಗಾಗಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸದಂತೆ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದೆ.   ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಬೇಕು, ಜಲಾಶಯಗಳು ತುಂಬಿ ರೈತರ ಬದುಕು ಹಸನ್ಮುಖಿಯಾಗಿರಬೇಕು, ಅನ್ನದಾತ ಸಮೃದ್ದಿಯಾಗಿದ್ದರೆ ನಾಡು ಸುಭೀಕ್ಷವಾಗಿರುತ್ತದೆ. ಈ ಬಾರಿ ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಯಡಿಯೂರಪ್ಪ : 

Yadiyurappa-Tumakuru

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಇಂದು ಬೆಳಗ್ಗೆ ಸುಮಾರು 9.50ಕ್ಕೆ ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ 10 ನಿಮಿಷಗಳ ಕಾಲ ಶ್ರೀಗಳ ಜತೆ ಮಾತುಕತೆ ನಡೆಸಿದ್ದು, ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಶ್ರೀಗಳ ಗಮನಕ್ಕೆ ತಂದರು.

ಬಳಿಕ ಮಠದಲ್ಲಿ ಉಪಹಾರ ಸೇವಿಸಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಂಸದ ಬಸವರಾಜ್ ಅವರ ನೇತೃತ್ವದಲ್ಲಿ ಜಾನುವಾರುಗಳಿಗೆ ನೀರು ಒದಗಿಸುವ ಉದ್ದೇಶದಿಂದ ಕೆರೆಯಲ್ಲಿ ಹೂಳು ತೆಗೆಯುವ ಕೆಲಸಕ್ಕೆ ಬಳ್ಳಾವಿಯಲ್ಲಿ ಚಾಲನೆ ನೀಡಿದ ನಂತರ ಬೆಂಗಳೂರಿಗೆ ಹೊರಡುತ್ತೇನೆ ಎಂದರು.  ಮಾಜಿ ಸಚಿವರಾದ ಬಸವರಾಜಬೊಮ್ಮಾಯಿ, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಉಮೇಶ್ ಕತ್ತಿ, ಲಕ್ಷ್ಮಣಸವದಿ, ಕಟ್ಟಸುಬ್ರಹ್ಮಣ್ಯನಾಯ್ಡು, ಶಾಸಕ ಬಿ.ಸುರೇಶ್‍ಗೌಡ, ಮಾಜಿ ಸಂಸದ ಎನ್.ಬಸವರಾಜು ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin