ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಗೃಹ ಇಲಾಖೆಯಿಂದ ಕಠಿಣ ಕ್ರಮ

Spread the love

Bang-Drugs

ಬೆಂಗಳೂರು, ಮಾ.23-ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸಲು ಗೃಹ ಇಲಾಖೆ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವಿಧಾನ ಪರಿಷತ್‍ನಲ್ಲಿಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.  ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎ.ಶರವಣ, ಎಂ.ಎ.ನಾರಾಯಣ ಸ್ವಾಮಿ, ಲೆಹರ್ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಮಾರಾಟ ನಿಯಂತ್ರಿಸಲು ಏನೇನು ಸಾಧ್ಯವೊ ಎಲ್ಲಾ ತಾಂತ್ರಿಕ ಕ್ರಮಗಳು ಸೇರಿದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು ಅಷ್ಟೇ ಅಲ್ಲದೆ ಜಿಲ್ಲಾ ಮಟ್ಟದಲ್ಲೂ ಕೂಡ ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರನ್ನು ಇದಕ್ಕೆ ಉತ್ತರದಾಯಿತ್ವರನ್ನಾಗಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಸಮುದ್ರ ,ವಾಯು, ರೈಲು, ರಸ್ತೆ ಮಾರ್ಗಗಳ ಮೂಲಕ ಮಾದಕ ವಸ್ತುಗಳು ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಇವುಗಳ ಮೇಲೆ ತೀವ್ರ ನಿಗಾ ವಹಿಸಿ ದಾಳಿ ಮಾಡಿ ಮಾರಾಟಗಾರರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲಾಗುತ್ತಿದೆ. 65 ದೇಶೀಯರು ಮತ್ತು 23 ವಿದೇಶಿಯರನ್ನು ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿದೆ. ವಿದೇಶಿ ಬಂಧಿತರಲ್ಲಿ ಅತಿ ಹೆಚ್ಚು ನೈಜೀರಿಯಾದವರೇ ಇದ್ದಾರೆ ಎಂದು ಹೇಳಿದರು.

ಮಂಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲ ರೂಪಿಸಿಕೊಂಡಿರುತ್ತಾರೆ. ಹಾಗಾಗಿ ಪ್ರತಿಯೊಂದು ಠಾಣೆ ಸಿಬ್ಬಂದಿಗೂ ಈ ಬಗ್ಗೆ ಸೂಚನೆ ನೀಡಿದ್ದು, ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ನಿಗಾ ಇಡುವಂತೆ ಸೂಚಿಸಿರುವುದರ ಜೊತೆಗೆ ಜಾಗೃತಿ ಮೂಡಿಸಲು ಸಲಹೆ ನೀಡಲಾಗಿದೆ ಎಂದು ಹೇಳಿದರು.  1023 ವೀಸಾ ಮುಗಿದಿರುವ ಅಕ್ರಮ ವಲಸಿಗರು ರಾಜ್ಯದಲ್ಲಿ ಇದ್ದಾರೆ. ಇವರಲ್ಲಿ 59 ಜನರನ್ನು ಗಡಿಪಾರು ಮಾಡಲಾಗಿದೆ. ಇತ್ತೀಚೆಗಷ್ಟೇ ವೀಸಾ ಅವಧಿ ಮುಗಿದು ಡ್ರಗ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯೊಬ್ಬನನ್ನು ನಗರದಲ್ಲಿ ಬಂಧಿಸಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆತ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
ನೈಜೀರಿಯಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದರೂ ಈವರೆಗೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೃತದೇಹದ ವಾರಸುದಾರರು ಬಾರದ್ದರಿಂದ ಮೃತದೇಹವನ್ನು ಆಸ್ಪತ್ರೆಯಲ್ಲೇ ಇಡಲಾಗಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin