ಮಾರಕ ಅಣ್ವಸ್ತ್ರ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ, ಏಷ್ಯಾದಲ್ಲಿ ತೀವ್ರ ಆತಂಕದ ವಾತಾವರಣ
ಸಿಯೋಲ್,ಸೆ.9-ವಿಶ್ವಸಂಸ್ಥೆಯ ಗಂಭೀರ ಎಚ್ಚರಿಕೆ ನಡುವೆಯೂ ಉತ್ತರ ಕೊರಿಯ ಇಂದು ಐದನೇ ಅತ್ಯಂತ ಪ್ರಬಲ ಮತ್ತು ಅಪಾಯಕಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು, ಇದರಿಂದ ಏಷ್ಯಾ ಪ್ರಾಂತ್ಯದಲ್ಲಿ ದೊಡ್ಡಮಟ್ಟದ ಆತಂಕ ಎದುರಾಗಿದೆ. ಉತ್ತರ ಕೊರಿಯ ಹಿಂದೆಂದೂ ಕಂಡು ಕೇಳರಿಯದ ಅತ್ಯಂತ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿದಂತೆ ಕಾಣುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯ, ಅಣ್ಣಸ್ತ್ರ ನೆಲೆ ಬಳಿ 5.3 ತೀವ್ರತೆಯ ಭೂಕಂಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಇದು ದೃಢಪಟ್ಟಿದೆ ಎಂದು ಹೇಳಿದೆ. ಉತ್ತರ ಕೊರಿಯದ ಪ್ಯುನ್ಗ್ಗೀ-ರಿ ಅಣ್ವಸ್ತ್ರ ಪರೀಕ್ಷೆ ಸ್ಥಳದ ಬಳಿ ಭೂಕಂಪ ಕಂಡುಬಂದಿದೆ. ದೇಶವು ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಈ ವಿದ್ಯಮಾನ ನಡೆದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಅಮೆರಿಕ ಮತ್ತು ಯೂರೋಪ್ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿನ ಭೂಕಂಪ ನಿಗಾ ಕೇಂದ್ರದಲ್ಲಿ ಭೂಕಂಪ ಸಂಭವಿಸಿರುವುದು ಪತ್ತೆಯಾಗಿದೆ. ಉತ್ತರ ಕೊರಿಯ ನಡೆಸಿದ ಐದನೇ ಅಣ್ವಸ್ತ್ರ ಪರೀಕ್ಷೆಯ ಪರಿಣಾಮದಿಂದ ಈ ಭೂಕಂಪ ಸಂಭವಿಸಿದಂತೆ ಕಾಣುತ್ತದೆ ಎಂದು ಸಿಯೋಲ್ನ ಭೂಗರ್ಭ ಅಧ್ಯಯನ ಸಂಸ್ಥೆ ಯೋನ್ಹಾಪ್ ತಿಳಿಸಿದೆ. ಉತ್ತರ ಕೊರಿಯದಲ್ಲಿ 5.0 ತೀವ್ರತೆಯ ಕೃತಕ ಭೂಕಂಪ ಸೃಷ್ಟಿಯಾಗಿದೆ. ಅಲ್ಲಿ ಅಣ್ವಸ್ತ್ರ ಪರೀಕ್ಷೆ ಸಾಧ್ಯತೆ ಇದೆ ಎಂದು ಉತ್ತರ ಕೊರಿಯಾ ಭೂಕಂಪ ಮಾಪನ ಸಂಸ್ಥೆ ಹೇಳಿದೆ.
► Follow us on – Facebook / Twitter / Google+